ADVERTISEMENT

ಅಘನಾಶಿನಿ– ತದಡಿ ನಡುವೆ ಅಪಾಯಕಾರಿ ಬಾರ್ಜ್

ದೊಡ್ಡ ಕಟ್ಟೆ ನಿರ್ಮಾಣದ ನಂತರ ಸಮಸ್ಯೆ ಪರಿಹಾರ: ಬಂದರು ಇಲಾಖೆ

ಎಂ.ಜಿ.ನಾಯ್ಕ
Published 11 ಡಿಸೆಂಬರ್ 2019, 16:30 IST
Last Updated 11 ಡಿಸೆಂಬರ್ 2019, 16:30 IST
ತದಡಿ– ಅಘನಾಶಿನಿ ನಡುವೆ ಅಘನಾಶಿನಿ ನದಿ ಬಾರ್ಜ್‌ನಲ್ಲಿ ಒತ್ತೊತ್ತಾಗಿ ಜನರು ಮತ್ತು ಬೈಕ್‌ಗಳನ್ನು ಸಾಗಿಸುತ್ತಿರುವುದು
ತದಡಿ– ಅಘನಾಶಿನಿ ನಡುವೆ ಅಘನಾಶಿನಿ ನದಿ ಬಾರ್ಜ್‌ನಲ್ಲಿ ಒತ್ತೊತ್ತಾಗಿ ಜನರು ಮತ್ತು ಬೈಕ್‌ಗಳನ್ನು ಸಾಗಿಸುತ್ತಿರುವುದು   

ಕುಮಟಾ: ತಾಲ್ಲೂಕಿನ ಅಘನಾಶಿನಿ ನದಿಯ ತದಡಿ ಹಾಗೂ ಅಘನಾಶಿನಿ ಗ್ರಾಮಗಳ ನಡುವೆ ಜನ,ಬೈಕ್‌ಗಳ ಸಾಗಾಟಕ್ಕೆ ಬಂದರು ಇಲಾಖೆ ಕಲ್ಪಿಸಿರುವ ಬಾರ್ಜ್ ತೀರಾ ಕಿರಿದಾಗಿದೆ.ಜೊತೆಗೇ ಅಪಾಯಕಾರಿಯಾಗಿದೆ.

ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನಿತ್ಯವೂ ನೂರಾರು ಜನರು ಈ ಬಾರ್ಜ್ ಮೇಲೆ ಅಘನಾಶಿನಿ ಮತ್ತು ತದಡಿ ನಡುವೆ ಸಂಚರಿಸುತ್ತಿದ್ದಾರೆ. ಒಮ್ಮೆ ಹತ್ತಾರು ಜನರು ಹಾಗೂ ಎಂಟು ಬೈಕ್‌ಗಳನ್ನು ಮಾತ್ರ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸಬಹುದಾಗಿದೆ. ಬಾರ್ಜ್ ಮೇಲೆ ಹೆಚ್ಚಿನ ಭಾರ ಬಿದ್ದರೆ ನೀರಿನಲ್ಲಿ ಮುಳುಗುವ ಅಪಾಯವಿದೆ.

‘ಅಘನಾಶಿನಿ ನದಿ ಸಮುದ್ರ ಸೇರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಮುದ್ರ ಅಲೆಗಳ ಅಬ್ಬರ ಜೋರಾಗಿರುತ್ತದೆ. ಬಾರ್ಜ್ ಚಿಕ್ಕದಿರುವುದರಿಂದ ಮಳೆಗಾಲದ ಎರಡು ತಿಂಗಳು ಬಾರ್ಜ್ ಸೌಲಭ್ಯ ಇರುವುದಿಲ್ಲ. ಆಗ ಜನರು ಖಾಸಗಿ ದೋಣಿ ಮೂಲಕ ಅಥವಾ ಕುಮಟಾಕ್ಕೆ ಬಂದು ಅಲ್ಲಿಂದ ಮಿರ್ಜಾನ, ಹಿರೇಗುತ್ತಿ, ಮಾದನಗೇರಿ ಮೂಲಕ ತದಡಿ ತಲುಪಬೇಕಾಗುತ್ತದೆ. ಬಂದರು ಇಲಾಖೆ ಟೆಂಡರ್ ಕರೆದು ಪೂರೈಸಿದ ಬಾರ್ಜ್ ಅನ್ನು ಗುತ್ತಿಗೆದಾರರು ಜನರ ಓಡಾಟಕ್ಕೆ ಬಳಸುತ್ತಿರುವುದು ಅನಿವಾರ್ಯವಾಗಿದೆ’ ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಲಂಬೋದರ ನಾಯ್ಕ ತಿಳಿಸಿದರು.

ADVERTISEMENT

ಹೆಚ್ಚಿನ ಮಾಹಿತಿ ನೀಡಿದ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ‘ಅಘನಾಶಿನಿ ನದಿಯ ತದಡಿ ದಡಕ್ಕೆ ದೊಡ್ಡ ಬಾರ್ಜ್ ನಿಲ್ಲುವಂಥ ಬಂದರು ಕಟ್ಟೆ ನಿರ್ಮಾಣವಾಗಿದೆ. ಅಘನಾಶಿನಿ ದಡದಲ್ಲಿ ಬಂದರು ಕಟ್ಟೆ ಚಿಕ್ಕದಿದ್ದು, ದೊಡ್ಡ ಕಟ್ಟೆಯನ್ನು ಹೊಸದಾಗಿ ನಿರ್ಮಿಸಿದ ನಂತರ ದೊಡ್ಡ ಬಾರ್ಜ್ ಸೌಲಭ್ಯ ಕಲ್ಪಿಸಲಾಗುವುದು. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು ಕೆಲವು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.