ADVERTISEMENT

ಕಾಳಿ ನದಿ ಶುದ್ಧಿಗೆ ಎರಡು ವರ್ಷದ ಗುರಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 14:33 IST
Last Updated 31 ಜುಲೈ 2020, 14:33 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು   

ಕಾರವಾರ: ‘ಕಾಳಿ ನದಿಯ ನೀರು ಮುಂದಿನ ಎರಡು ವರ್ಷಗಳ ಒಳಗಾಗಿ ಮಾಲಿನ್ಯ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕ್ರಮ ವಹಿಸಬೇಕು. ನದಿಯನ್ನು ಮಲಿನಗೊಳಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ನ್ಯಾಯಾಲಯದ ಆದೇಶದಂತೆ ಈಗಾಗಲೇ ಜಿಲ್ಲಾಮಟ್ಟದ ವಿಶೇಷ ಪರಿಸರ ಕಣ್ಗಾವಲು ಕಾರ್ಯಪಡೆಯನ್ನು ರಚಿಸಲಾಗಿದೆ. ದಾಂಡೇಲಿಯಿಂದ ಬೊಮ್ಮನಹಳ್ಳಿಯವರೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಿಯಾ ಯೋಜನೆಯಂತೆ ಕಾಳಿ ನದಿಯ ನೀರನ್ನು ಶುದ್ಧೀಕರಿಸಬೇಕು. ಇದು ಕೇವಲ 10 ಕಿಲೋಮೀಟರ್ ವ್ಯಾಪ್ತಿಗೆ ಸೀಮಿತವಾಗದೇ ನದಿಯ ಉಗಮಸ್ಥಾನದಿಂದ ಸಮುದ್ರ ಸೇರುವವರೆಗೂ ಜಾರಿಯಾಗಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ನೀರಿನ ಗುಣಮಟ್ಟವು ಸಮುದ್ರ ಸೇರುವ ಜಾಗದಲ್ಲೂ ನದಿಯ ಉಗಮ ಸ್ಥಾನದಲ್ಲಿರುವ ಮಟ್ಟದಲ್ಲೇ ಇರಬೇಕು. ನದಿಪಾತ್ರದಿಂದ ಮಾಲಿನ್ಯಕಾರಕಗಳು ನೀರಿಗೆ ಸೇರದಂತೆ ತಡೆಯಬೇಕು. ಈ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳು ನದಿಗೆ ಮಲಿನ ವಸ್ತುಗಳು ಸೇರುವ ಪ್ರದೇಶಗಳನ್ನು ಗುರುತಿಸಿ, ನಕ್ಷೆಯನ್ನು ತಯಾರಿಸಬೇಕು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ, ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ, ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.