ADVERTISEMENT

ಸ್ಥಳೀಯವಾಗಿ ಸಮಸ್ಯೆ ಪರಿಹಾರಕ್ಕೆ ಯತ್ನ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 15:38 IST
Last Updated 4 ಮಾರ್ಚ್ 2021, 15:38 IST
ಮುಲ್ಲೈ ಮುಗಿಲನ್
ಮುಲ್ಲೈ ಮುಗಿಲನ್   

ಕಾರವಾರ: ‘ಮೂರು ವಾರಗಳಿಗೆ ಅಥವಾ ತಿಂಗಳಿಗೊಮ್ಮೆ ವಿವಿಧ ತಾಲ್ಲೂಕುಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲು ಚಿಂತಿಸಲಾಗಿದೆ. ಈ ಬಗ್ಗೆ ಚರ್ಚಿಸಿ ರೂಪರೇಷೆ ಸಿದ್ಧಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಆಯಾ ಭಾಗಗಳ ಸಮಸ್ಯೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿದ್ದೇನೆ. ವಿಶಾಲವಾಗಿರುವ ಈ ಜಿಲ್ಲೆಯಲ್ಲಿ ಬೇರೆ ಬೇರೆ ಭಾಗಗಳಲ್ಲಿ ಪ್ರತ್ಯೇಕ ಸಮಸ್ಯೆಗಳಿವೆ. ಆದ್ದರಿಂದ ಅವುಗಳನ್ನು ಪರಿಹರಿಸಲು ಆಯಾ ಭಾಗಗಳಿಗೇ ಅಧಿಕಾರಿಗಳು ಭೇಟಿ ನೀಡುವುದರಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪ್ರಮುಖವಾಗಿರುವ ಅರಣ್ಯ ಹಕ್ಕು, ಅರಣ್ಯ ಒತ್ತುವರಿ ಸಮಸ್ಯೆಗಳ ಬಗ್ಗೆ ನಾನು ಅಧ್ಯಯನ ಮಾಡಬೇಕಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಜಾರಿಕೊಳ್ಳುವುದು ನನಗೆ ಇಷ್ಟವಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆ ತಂಡವಾಗಿ ಕೆಲಸ ಮಾಡಬೇಕು. ಸಮಸ್ಯೆ ನಿವಾರಣೆಯ ಗುರಿಯಿಟ್ಟು ಕೆಲಸ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹಿರಿಯ ನಾಗರಿಕರು, ಅಂಗವಿಕಲರು ತಮ್ಮ ಪ್ರಮಾಣಪತ್ರಗಳಿಗಾಗಿ ಕಾರವಾರಕ್ಕೇ ಬರುವ ಸ್ಥಿತಿಯಿದೆ. ಇದನ್ನು ತಪ್ಪಿಸಿ ತಾಲ್ಲೂಕು ಕೇಂದ್ರಗಳಲ್ಲೇ ಅವರಿಗೆ ಸೌಕರ್ಯಗಳು ಸಿಗುವಂತೆ ಆಗಬೇಕು’ ಎಂದು ಪತ್ರಕರ್ತರು ಗಮನ ಸೆಳೆದರು.ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

‘ಜಿಲ್ಲೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅವಕಾಶಗಳನ್ನು ಹೊಂದಿದೆ. ಆದರೆ, ಇಲ್ಲಿ ಕಡಲತೀರಗಳಲ್ಲಿ ಪ‌್ರವಾಸಿಗಳಿಗೆ ಮೂಲ ಸೌಕರ್ಯಗಳಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಗಂಭೀರವಾಗಿ ಕೆಲಸ ಮಾಡಲಾಗುವುದು. ಕಡಲತೀರದ ಬಳಕೆದಾರರ ಜೊತೆ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.