ADVERTISEMENT

ಪರಿಶಿಷ್ಟ ಪಂಗಡ ಸೇರ್ಪಡೆಗೆ ಪ್ರಯತ್ನ: ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:36 IST
Last Updated 3 ಮಾರ್ಚ್ 2021, 13:36 IST
ಕುಮಟಾ ತಾಲ್ಲೂಕಿನ ದೀವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಉದ್ಘಾಟಿಸಿದರು
ಕುಮಟಾ ತಾಲ್ಲೂಕಿನ ದೀವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಉದ್ಘಾಟಿಸಿದರು   

ಕುಮಟಾ: ‘ಹಾಲಕ್ಕಿ ಒಕ್ಕಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಈ ಹಿಂದೆಯೇ ಪ್ರಯತ್ನಗಳು ನಡೆದರೂ ಯಶಸ್ವಿಯಾಗಿರಲಿಲ್ಲ. ಈಗ ಮತ್ತೆ ಆ ಪ್ರಯತ್ನಕ್ಕೆ ನಾವೆಲ್ಲ ಒಟ್ಟಾಗಿ ಕೈಜೋಡಿಸುತ್ತೇವೆ‌’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ತಾಲ್ಲೂಕಿನ ದೀವಗಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮಿಂದ ಏನೂ ಸಧ್ಯವಾಗುತ್ತಿಲ್ಲ ಎಂದು ಹತಾಶರಾಗಿ ಕೈಚೆಲ್ಲಿ ಕುಳಿತುಕೊಳ್ಳುವ ಪ್ರವೃತ್ತಿಯನ್ನು ಸಮಾಜದ ಜನರು ಬಿಡಬೇಕು. ಸತತ ಪ್ರಯತ್ನದಿಂದ ಏನೆಲ್ಲ ಸಾಧ್ಯ ಎನ್ನುವುದನ್ನು ಸಮಾಜದ ಹಿರಿಯ ಮಹಿಳೆಯರಾದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ತೋರಿಸಿಕೊಟ್ಟಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದರು.

ADVERTISEMENT

ಸಭಾಭವನ ಉದ್ಘಾಟಿಸಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಹಾಲಕ್ಕಿ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬೆಳೆದು ಮುನ್ನೆಲೆಗೆ ಬರಬೇಕಿದೆ. ಹಾಲಕ್ಕಿ ಕಲೆಗಳು ಆ ಸಮಾಜದ ಆಸ್ತಿಯಾಗಿದ್ದು, ಅದನ್ನು ಬೆಳೆಸಲು ಸಮುದಾಯ ಭವನ ಬಳಕೆಯಾಗಬೇಕು’ ಎಂದು ಆಶಿಸಿದರು.

ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ‘ಗುರುಗಳು ಇಲ್ಲದ ಸಮಾಜಕ್ಕೆ ನಾವೇ ಗುರುವಾಗುತ್ತೇವೆ ಎಂದು ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದ ಮಾತು ಹಾಲಕ್ಕಿ ಒಕ್ಕಲಿಗರ ಸಮಾಜದ ವಿಷಯದಲ್ಲಿ ನಿಜವಾಗಿದೆ’ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಹಿಂದಿನಿಂದಲೂ ಹಾಲಕ್ಕಿ ಒಕ್ಕಲಿಗ ಹಾಗೂ ಗ್ರಾಮ ಒಕ್ಕಲಿಗ ಸಮಾಜದ ಜನರ ಜೊತೆ ಆತ್ಮೀಯ ಒಡನಾಟ ಹೊಂದಿದ್ದೇನೆ. ಈ ಸಲ ದಾಖಲೆಗಳ ಅಂತರದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಲು ಈ ಸಮಾಜಗಳ ಕೊಡುಗೆ ಕಾರಣ. ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹ 1 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಸಮಾಜದ ಮುಖಂಡ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ, ‘ನೂತನ ಸಮುದಾಯ ಭವನ ಹಾಲಕ್ಕಿ ಒಕ್ಕಲಿಗರ ಅಂಧಕಾರ ದೂರ ಮಾಡಿ ಶಕ್ತಿ ಕೇಂದ್ರವಾಗಿ ಬೆಳೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುರುವೇಕೆರೆ ಶಾಸಕ ಜಯರಾಮ, ಕಾಂಗ್ರೆಸ್ ಮುಖಂಡರಾದ ಶಾರದಾ ಶೆಟ್ಟಿ, ಮಂಕಾಳು ವೈದ್ಯ ಮಾತನಾಡಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಅಬಕಾರಿ ಸಚಿವ ಗೋಪಾಲಯ್ಯ, ಯುವಜನ ಸೇವಾ ಇಲಾಖೆ ಸಚಿವ ನಾರಾಯಣ ಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಗಜಾನನ ಪೈ, ಸಮಾಜದ ಹಿರಿಯ ಮಹಿಳೆಯರಾದ ಸುಕ್ರಿ ಗೌಡ, ತುಳಸಿ ಗೌಡ, ಮುಖಂಡರಾದ ಗೋವಿಂದ ಗೌಡ, ಸುಬ್ರಾಯ ಗೌಡ, ಕೃಷ್ಣ ಗೌಡ, ಮಂಜುನಾಥ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.