
ಮಂಗಗಳು
ಸಿದ್ದಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಣಪತಿಗಲ್ಲಿಯ ಉದಯ ರಂಗೈನ್ ಹಾಗೂ ಅಶೋಕ ಪ್ರಭು ಎಂಬುವವರ ಮನೆಯ ಹಿಂಭಾಗದಲ್ಲಿ ಗುರುವಾರ 3 ಮಂಗಗಳು ಏಕಕಾಲದಲ್ಲಿ ಮೃತಪಟ್ಟಿವೆ.
ವಿಷಯ ತಿಳಿದ ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ ಶಾನಭಾಗ ಅವರು ಮಂಗನ ಕಾಯಿಲೆ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ವರದಿಯಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಗಳಿಗೆ ವಿಷಯ ತಿಳಿಸಿದರು.
ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆಯ ತಾಲ್ಲೂಕು ಪಶುವೈದ್ಯಾಧಿಕಾರಿಗಳಿಂದ ಮೃತ ಮಂಗಗಳ ಮರಣೋತ್ತರ ಪರೀಕ್ಷೆ ಮಾಡಿಸಿ ಅವಯವಗಳನ್ನು ಸಂಗ್ರಹಿಸಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಪುಣೆ ಮತ್ತು ಶಿವಮೊಗ್ಗದ ಸಂಶೋಧನಾಲಯಗಳಿಗೆ ತಪಾಸಣೆಗಾಗಿ ಕಳುಹಿಸಿದ್ದಾರೆ.
ನಂತರ ಅರಣ್ಯ ಇಲಾಖೆಯ ವತಿಯಿಂದ ಮೃತ ಮಂಗಗಳ ದೇಹವನ್ನು ದಹನ ಮಾಡಲಾಯಿತು. ಸಿದ್ದಾಪುರ ಪಟ್ಟಣ ಪಂಚಾಯಿತಿ ವತಿಯಿಂದ ಮಂಗಗಳು ಮರಣಹೊಂದಿದ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಿದರು. ಸಂಶೋಧನಾಲಯಗಳ ವರದಿ ಬರುವವರೆಗೆ ಸಾರ್ವಜನಿಕರು ಜಾಗರೂಕರಾಗಿರಬೇಕೆಂದು, ಈ ಭಾಗದಲ್ಲಿ ಮಂಗನ ಕಾಯಿಲೆಯ ಲಕ್ಷಣಗಳಾದ ಜ್ವರ ಹಾಗೂ ಮೈಕೈ ನೋವು ಆರಂಭವಾದರೆ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕಾಗಿ ಆರೋಗ್ಯ ಇಲಾಖೆಯವರು ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.