ADVERTISEMENT

ಕಾರವಾರ: ಸ್ವಾವಲಂಬಿ ಬದುಕಿಗೆ ‘ದೀಪ ಸಂಜೀವಿನಿ’

ಜಿ.ಪಂ. ಕಚೇರಿ ಆವರಣದಲ್ಲಿ ಹಣತೆ ಮಾರಾಟಕ್ಕೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:11 IST
Last Updated 25 ಅಕ್ಟೋಬರ್ 2021, 14:11 IST
ಕಾರವಾರದಲ್ಲಿ ‘ದೀಪ ಸಂಜೀವಿನಿ’ ಕಾರ್ಯಕ್ರಮಕ್ಕೆ ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ ಸೋಮವಾರ ಚಾಲನೆ ನೀಡಿದರು
ಕಾರವಾರದಲ್ಲಿ ‘ದೀಪ ಸಂಜೀವಿನಿ’ ಕಾರ್ಯಕ್ರಮಕ್ಕೆ ಜಿ.ಪಂ. ಸಿ.ಇ.ಒ ಎಂ.ಪ್ರಿಯಾಂಗಾ ಸೋಮವಾರ ಚಾಲನೆ ನೀಡಿದರು   

ಕಾರವಾರ: ‘ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸ್ವ ಉದ್ಯೋಗಿನಿಯರಾಗಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ ಹೇಳಿದರು.

ಜಿಲ್ಲಾ ಪಂಚಾಯಿತಿ ಕಚೇರಿಯ ಹೊರ ಆವರಣದಲ್ಲಿ, ‘ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ’ದಡಿ ಸ್ವ ಸಹಾಯ ಸಂಘದ ಸದಸ್ಯೆಯರಿಗೆ ಏರ್ಪಡಿಸಲಾದ ‘ದೀಪ ಸಂಜೀವಿನಿ’ ಕಾರ್ಯಕ್ರಮಕ್ಕೆ ಅವರು ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಅಭಿಯಾನದಲ್ಲಿ ವಿವಿಧ ವಿನ್ಯಾಸಗಳ ಮಣ್ಣಿನ ಹಣತೆಗಳನ್ನು ಮಾರಾಟ ಮಾಡಲು ಸದಸ್ಯೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಬಡ ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹಣತೆ ಮಾರಾಟ ಮಾಡುವ ಮಹಿಳೆಯರಿಗೆ ಮಳೆಯಿಂದ ತೊಂದರೆಯಾಗದಂತೆ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಅವರು ಸೂಚಿಸಿದರು.

ADVERTISEMENT

ಮಣ್ಣಿನಿಂದ ತಯಾರಿಸಲಾಗುವ ಹಣತೆಗೆ ದೀಪಾವಳಿ ಸಂದರ್ಭದಲ್ಲಿ ಬೇಡಿಕೆಯಿದೆ. ಹಾಗಾಗಿ ಕೆಲವು ಸ್ವ– ಸಹಾಯ ಸಂಘಗಳ, ಸದಸ್ಯರನ್ನು ಹಣತೆ ತಯಾರಿಸುವ ಕಾರ್ಯಕ್ಕೆ ಪ್ರೋತ್ಸಾಹಿಸಲಾಗಿದೆ. ಅವರು ತಯಾರಿಸುವ ಹಣತೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ‘ದೀಪ ಸಂಜೀವಿನಿ’ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.

‘ಕುಂಬಾರಿಕೆ ನಮ್ಮ ಮೂಲ ಕಸುಬು. ತೀರಾ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿತ್ತು. ಮಾರುಕಟ್ಟೆಯ ಸಮಸ್ಯೆಯೂ ಇತ್ತು. ಎರಡು ತಿಂಗಳ ಹಿಂದೆ ನಮ್ಮ ಸಂಘಕ್ಕೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ₹ 75 ಸಾವಿರ ಪ್ರೋತ್ಸಾಹ ಧನ ದೊರಕಿದೆ. ಚೆನ್ನಾಗಿ ವ್ಯಾಪಾರವಾಗುತ್ತಿದ್ದು, ಹೆಚ್ಚಿನ ವಹಿವಾಟಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ಜೊಯಿಡಾದ ಲಕ್ಷ್ಮೀ ಸ್ವ-ಸಹಾರ ಸಂಘದ ಸದಸ್ಯೆ ಶೋಭಾ ಸದು ಕುಂಬಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.