
ಮುಂಡಗೋಡ: ದೀಪಾವಳಿ ಹಬ್ಬದ ಅಂಗವಾಗಿ ಇಲ್ಲಿನ ಹಳೂರು ಓಣಿಯಲ್ಲಿ ಬುಧವಾರ ಹೋರಿ ಬೆದರಿಸುವ ಕಾರ್ಯಕ್ರಮ ಜನರನ್ನು ರಂಜಿಸಿತು. ಹತ್ತಾರು ಹಳ್ಳಿಗಳಿಂದ ಹೋರಿಗಳನ್ನು ಸಿಂಗರಿಸಿ ತಂದಿದ್ದ ರೈತರು, ಹೋರಿಗಳನ್ನು ಓಡಿಸಿ, ಕೇಕೆ ಹಾಕುತ್ತ ಕುಣಿದರು.
ತರಹೇವಾರಿ ಹೆಸರುಗಳಿಂದ ಗುರುತಿಸಿಕೊಂಡಿದ್ದ ಹೋರಿಗಳನ್ನು ನೂರಾರು ಜನರ ಮಧ್ಯೆ ಓಡಿಸಲಾಯಿತು. ಒಂದಕ್ಕಿಂತ ಒಂದು ಸುಂದರ ಎನಿಸಿದ ಅಲಂಕಾರ ಪ್ರೇಕ್ಷಕರನ್ನು ಆಕರ್ಷಿಸಿದವು. ಕೆಲವು ಹೋರಿಗಳ ಹೆಸರನ್ನು ಧ್ವನಿವರ್ಧಕದಲ್ಲಿ ಹೇಳಿದಾಗ, ಜನರ ಕೇಕೆ, ಶಿಳ್ಳೆ ಮಾರ್ದನಿಸಿತು. ಈ ಹಿಂದೆ ನಡೆದ ಹೋರಿ ಬೆದರಿಸುವ ಹಬ್ಬಗಳಲ್ಲಿ ಜನಪ್ರಿಯತೆ ಗಳಿಸಿರುವ, ಹಲವು ಹೋರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಹೋರಿ ಹಬ್ಬವನ್ನು ವೀಕ್ಷಿಸಲು ಮಕ್ಕಳು, ಯುವತಿಯರು ಮನೆಯ ತಾರಸಿ ಮೇಲೆ ಜಮಾವಣೆಗೊಂಡಿದ್ದ ದೃಶ್ಯ ಕಂಡುಬಂತು.
‘ಕೆಲವು ಹೋರಿಗಳು ಮಿಂಚಿನಂತೆ ಓಡಿದವು. ಕೊರಳಲ್ಲಿ ಕಟ್ಟಿರುವ ಕೊಬ್ಬರಿ ಸರವನ್ನು ಹರಿಯಲು ಯುವಪಡೆ ನಿಗದಿತ ಗೆರೆಯಲ್ಲಿ ಜಮಾವಣೆಗೊಂಡಿತ್ತು. ಹೋರಿ ಪಳಗಿಸಲು ನಿಂತಿದ್ದ ಯುವಪಡೆ ಒಂದೆಡೆಯಾದರೆ, ಹೋರಿ ಯಾರ ಕೈಗೂ ಸಿಗುವುದಿಲ್ಲ ಎನ್ನುವ ಆತ್ಮವಿಶ್ವಾಸದಲ್ಲಿ ಕುಣಿಯುತ್ತಿದ್ದ ಮಾಲೀಕ ಮತ್ತೊಂದೆಡೆ. ಇವೆಲ್ಲದರ ಮಧ್ಯೆ, ಹೋರಿ ಹೆಸರಿನ ಧ್ವಜಗಳನ್ನು ಹಾರಿಸುತ್ತ, ಹೋರಿಗಳನ್ನು ಬೆಂಬಲಿಸುತ್ತಿದ್ದ ಅಭಿಮಾನಿಗಳ ಪಡೆ ಜನರ ಗಮನಸೆಳೆದವು.
‘ಪ್ರತಿ ವರ್ಷದಂತೆ ಈ ವರ್ಷವೂ ಸಾಂಪ್ರದಾಯಿಕ ಹೋರಿ ಬೆದರಿಸುವ ಕಾರ್ಯಕ್ರಮ ರೈತರ ಹಬ್ಬವಾಗಿ ನಡೆದಿದೆ. ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮವಾಗಿ ಓಡಿರುವ ಹೋರಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತುʼ ಎಂದು ಸ್ಥಳಿಯ ನಿವಾಸಿ ಪರಶುರಾಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.