ADVERTISEMENT

ಬಲೀಂದ್ರ ವಿಸರ್ಜನೆ: ಹುಲಿದೇವರಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 14:35 IST
Last Updated 28 ಅಕ್ಟೋಬರ್ 2019, 14:35 IST
ಶಿರಸಿಯ ವಾದಿರಾಜ ಮಠದಲ್ಲಿ ವಿಶ್ವವಲ್ಲಭ ಸ್ವಾಮೀಜಿ ಗೋ ಪೂಜೆ ನೆರವೇರಿಸಿದರು
ಶಿರಸಿಯ ವಾದಿರಾಜ ಮಠದಲ್ಲಿ ವಿಶ್ವವಲ್ಲಭ ಸ್ವಾಮೀಜಿ ಗೋ ಪೂಜೆ ನೆರವೇರಿಸಿದರು   

ಶಿರಸಿ: ತಾಲ್ಲೂಕಿನಾದ್ಯಂತ ಭಾನುವಾರ ಮತ್ತು ಸೋಮವಾರ ದೀಪಾವಳಿಯನ್ನು ಸಡಗರದಿಂದ ಆಚರಿಸಲಾಯಿತು. ನರಕ ಚತುದರ್ಶಿಯಂದು ಸ್ಥಾಪನೆ ಮಾಡಿದ ಬಲೀಂದ್ರನನ್ನು ಬಲಿಪಾಡ್ಯಮಿಯಂದು ವಿಸರ್ಜನೆ ಮಾಡಲಾಯಿತು.

ದೀಪಾವಳಿ ಆಚರಣೆಯ ಅವಿಭಾಜ್ಯ ಭಾಗವಾಗಿರುವ ಗೋಪೂಜೆಯನ್ನೂ ನೆರವೇರಿಸಲಾಯಿತು. ಪ್ರಕೃತಿ, ಸಂಸ್ಕೃತಿ, ಸಾಮರಸ್ಯ ಬಿಂಬಿಸುವ ಈ ಆಚರಣೆಯಲ್ಲಿ ಪಶುಸಂಪತ್ತನ್ನು ರಕ್ಷಿಸಲುಕೃಷಿಕರು ಹುಲಿದೇವರ ಪೂಜೆ ಮಾಡಿದರು. ಬಾಲಕ್ಕೊಂದು ತೆಂಗಿನಕಾಯಿ ನೈವೇದ್ಯ ಹುಲಿದೇವರಿಗೆ ಅರ್ಪಣೆಯಾಗುತ್ತದೆ.

ಹಸುಗಳನ್ನು ಗೋಮಾಳಕ್ಕಟ್ಟಿ ಚೌಲದೆತ್ತುಗಳ ಪಾದತೊಳೆದು, ಹಾನಬಳಿದು ಕೊಟ್ಟಿಗೆ ತುಂಬಿಸಿಕೊಳ್ಳುವ ಪದ್ಧತಿಯಿದೆ. ಪ್ರತಿವರ್ಷವೂ ಪೂಜೆಮಾಡುವ ಹಸುವನ್ನು ಅಡಿಕೆಯ ಸರ, ಚಂಡುಹೂವು, ಅಡಕೆ ಸಿಂಗಾರ, ಕೆಮ್ಮಣ್ಣು, ಶೇಡಿಗಳಿಂದ ಶೃಂಗರಿಸಲಾಗುತ್ತದೆ.

ADVERTISEMENT

ಸೌತೆಕಾಯಿಯಿಂದ ತಯಾರಿಸಿದ ವಿಶೇಷ ಸಿಹಿ ಅಡುಗೆಯ ಕಡಬು, ಹೋಳಿಗೆ, ಹುಗ್ಗಿಯನ್ನದ ಸುಗ್ರಾಸ ಭೋಜನ ನೀಡಿ, ಹಾಡಿನ ಸೇವೆಗೈದು ಭಕ್ತಿಭಾವದಿಂದ ಪೂಜೆ ಅರ್ಪಿಸಲಾಗುತ್ತದೆ. ಕೃಷಿಕರ ಮನೆಗಳಲ್ಲಿ ಗೋಪೂಜೆ ಮುಗಿಯುವವರೆಗೂ ಬಹುತೇಕವಾಗಿ ಉಪವಾಸದ ವ್ರತವನ್ನು ಆಚರಿಸಲಾಗುತ್ತದೆ. ಪೂಜೆಯ ನಂತರ ಹೊಸ ಉಡುಗೆಯುಟ್ಟು ಬೂರೆಹಬ್ಬದಂದು ತಯಾರಿಸಿಡಲಾದ ಬೂರೆಕಪ್ಪನ್ನು ಮನೆಯ ಹಿರಿಕಿರಿಯರೆಲ್ಲ ಹಚ್ಚಿಕೊಳ್ಳುತ್ತಾರೆ. ಬೂರೆಕಪ್ಪಿಗೆ ಕೆಟ್ಟ ದೃಷ್ಟಿಯಿಂದ ಕಾಪಾಡುವ ಶಕ್ತಿಯಿದೆಯೆಂಬ ನಂಬಿಕೆ ಹಳ್ಳಿಗರಲ್ಲಿದೆ. ನಂತರ ಊರ ದೇವಸ್ಥಾನಕ್ಕೆ ತೆರಳಿ ಸಾಮೂಹಿಕ ಪೂಜೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.