ADVERTISEMENT

ಶಿರಸಿ: ದೊಡ್ಡಹಬ್ಬದಲ್ಲಿ ದನಬೈಲೇ ಆಕರ್ಷಣೆ

ಕಡಬಾಳದಲ್ಲಿ ದೇಸಿ ಕ್ರೀಡೆಯ ಸೊಗಡು

ಸಂಧ್ಯಾ ಹೆಗಡೆ
Published 24 ಅಕ್ಟೋಬರ್ 2019, 19:30 IST
Last Updated 24 ಅಕ್ಟೋಬರ್ 2019, 19:30 IST
ಹುಲಿಯಪ್ಪ ದೇವರಿಗೆ ಸಾಮೂಹಿಕ ಪೂಜೆ
ಹುಲಿಯಪ್ಪ ದೇವರಿಗೆ ಸಾಮೂಹಿಕ ಪೂಜೆ   

ಶಿರಸಿ: ಮಣ್ಣು ಮತ್ತು ಮನುಷ್ಯ, ರೈತ ಮತ್ತು ಕೃಷಿ ನಡುವಿನ ಭಾವನಾತ್ಮಕ ಬೆಸುಗೆಯನ್ನು ಬಿಗಿಗೊಳಿಸುವ ವಿಶಿಷ್ಟ ಹಬ್ಬ ದೀಪಾವಳಿ. ನಗರಗಳಲ್ಲಿ ಇದು ಹಣತೆ ಹಚ್ಚುವ ಹಬ್ಬವಾದರೆ, ಹಳ್ಳಿಗಳಲ್ಲಿ ಮನೆಯನ್ನು ಬೆಳಗುವ ದೊಡ್ಡಹಬ್ಬ. ಹೀಗಾಗಿ ಕೃಷಿಕರ ಮನೆಗಳಲ್ಲಿ ಈ ಹಬ್ಬದ ಸಂಭ್ರಮ ಜೋರು.

ಮೂರು ದಿನಗಳ ಹಬ್ಬದಲ್ಲಿ ಬಲಿಪಾಡ್ಯ ಹೆಚ್ಚು ವಿಶೇಷ. ಅಂದು ಬೆಳ್ಳಂಬೆಳಿಗ್ಗೆ ಕಾಡಂಚಿನ ಹುಲಿಯಪ್ಪ ದೇವರಿಗೆ ಸಾಮೂಹಿಕ ಪೂಜೆ, ನಂತರ ಮನೆಯಲ್ಲಿ ಗೋಪೂಜೆ, ಆಯುಧ, ವಾಹನ, ಲಕ್ಷ್ಮಿ ಪೂಜೆ, ಮಧ್ಯಾಹ್ನ ದನಬೈಲಿನ ಸಡಗರ. ಇದು ಕೃಷಿಕರು ಹಾಗೂ ಕೃಷಿ ಒಡನಾಡಿಗಳಾದ ಜಾನುವಾರುಗಳಿಗೆ ಮುದ ನೀಡುವ ಜನಪದ ಕ್ರೀಡೆ. ಜನಪದರು ನಡೆಸಿಕೊಂಡು ಬಂದಿರುವ ಈ ಮನರಂಜನೆ ಪ್ರತಿ ಗ್ರಾಮದಲ್ಲೂ ನಡೆಯುತ್ತದೆ. ಆದರೆ, ತಾಲ್ಲೂಕಿನ ಕಡಬಾಳದಲ್ಲಿ ದನಬೈಲೆಂದರೆ ಬರೀ ಹಬ್ಬದ ಸಾಂಪ್ರದಾಯಿಕ ಆಚರಣೆಯಲ್ಲ, ಇದೊಂದು ಊರ ಜಾತ್ರೆ. ನೆಂಟರಿಷ್ಟರು, ನವಜೋಡಿಗಳಿಗೆ ಅಂದು ಜೂಜಾಟದ ಮೋಜು.

ಈ ಊರಿನಲ್ಲಿ ಸುಮಾರು 160 ಮನೆಗಳಿವೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಊರಿನ ಬಯಲಿನಲ್ಲಿ ಎಲ್ಲ ಮನೆಯ ಸದಸ್ಯರು ಸೇರುವುದು ಕಡ್ಡಾಯ. ಅಲ್ಲಿ ಜಾತಿ ಭೇದವಿಲ್ಲ. ದೊಡ್ಡಹಬ್ಬದ ಖುಷಿಯಲ್ಲಿ ಎಲ್ಲರೂ ಸಮಾನ ಭಾಗಿಗಳು. ಮಧ್ಯಾಹ್ನ ಗೋವುಗಳಿಗೆ ಪೂಜೆ ಮಾಡಿರುವುದರಿಂದ, ಅಲ್ಲದೇ ಹೆಸರೇ ದನಬೈಲು ಆಗಿರುವುದರಿಂದ ಮೊದಲ ಆದ್ಯತೆ ಜಾನುವಾರಿಗೆ. ಬಣ್ಣ, ಬ್ಯಾಗಡೆಗಳಿಂದ ಅಲಂಕರಿಸಿದ ಹೋರಿಗಳನ್ನು ಬಯಲು ಅಥವಾ ರಸ್ತೆಯಲ್ಲಿ ಓಡಿಸುತ್ತಾರೆ. ಯುವಕರ ಸಿಳ್ಳೆಗೆ ಹೋರಿಗಳು ಇನ್ನಷ್ಟು ವೇಗವಾಗಿ ಓಡುತ್ತವೆ. ಸಿಳ್ಳೆಗಳು ಜೋರಾದಂತೆ ಹೋರಿಗಳ ಓಟವೂ ಬಿರುಸಾಗುತ್ತದೆ.

ADVERTISEMENT

ಇದು ಮುಗಿದಿದ್ದೇ ಸ್ಪರ್ಧೆಗಳ ಸರದಿ. ಸ್ಪರ್ಧೆ ಶುರುವಾಯಿತೆಂದರೆ ನವದಂಪತಿಗಳಲ್ಲಿ ಭಯಮಿಶ್ರಿತ ಪುಳಕ. ಯಾಕೆಂದರೆ ಸ್ಪರ್ಧೆಯ ಮೊದಲ ಸ್ಪರ್ಧಿಗಳೇ ಅವರು. ಊರ ಮಗಳು, ಹೊಸದಾಗಿ ಬಂದ ಅಳಿಯ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೆಲದ ಮೇಲಿಟ್ಟ ತೆಂಗಿನ ಕಾಯಿಯನ್ನು ಕೋಲಿನಿಂದ ಹೊಡೆಯಬೇಕು. ಗುರಿ ತಪ್ಪಿದರೆ, ನಿಂತು ನೋಡುವ ನೂರಾರು ಪ್ರೇಕ್ಷಕರೆದರು ಪೆಚ್ಚು ಮೋರೆ ಹಾಕಿಕೊಂಡು ಬರಬೇಕು !

ನವಜೋಡಿಗೆ ಮಾತ್ರವಲ್ಲ, ಊರಿನ ಹುಡುಗರು, ಗಂಡಸರು, ಹೆಂಗಸರು ಎಲ್ಲರಿಗೂ ಕಾಯಿಜೂಜು, ಜೂಜಾಟದ ಸ್ಪರ್ಧೆಗಳಿರುತ್ತವೆ. ತೆಂಗಿನಕಾಯಿಯನ್ನು ಮೇಲಕ್ಕೆ ಹಾರಿಸಿ, ಅದನ್ನು ಹಿಡಿದವರ ಕೈಯಿಂದ ತಪ್ಪಿಸಿಕೊಂಡು, ದೇವರ ಕಲ್ಲಿಗೆ ಹೊಡೆಯಬೇಕು. ಅದಾದ ಮೇಲೆ ಭಾರ ಎತ್ತುವ ಸ್ಪರ್ಧೆ. ವೃತ್ತಾಕಾರದ ಕಲ್ಲನ್ನು ಎತ್ತಿ ಹೆಗಲ ಮೇಲಿಡಬೇಕು. ಗಟ್ಟಿ ಎದೆಯವ ಮಾತ್ರ ಈ ಕ್ವಿಂಟಲ್ ಭಾರದ ಕಲ್ಲನ್ನೆತ್ತಿ ಬೀಗಬಲ್ಲ.

ಹೊಸ ವಾಹನಗಳ ಸವಾರರು ವಾಹನವೇರಿ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಶಾಂತೇಶ್ವರ ದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಲೀಂದ್ರನಿಗೆ ಇಟ್ಟಿದ್ದ ಅಕ್ಕಿಕಾಳನ್ನು ದೇವರ ಕಲ್ಲಿಗೆ ಹಾಕುವುದರೊಂದಿಗೆ ಹಬ್ಬದ ಸಡಗರಕ್ಕೆ ತೆರೆ ಬೀಳುತ್ತದೆ.

‘ಹೆಸರಿಗಷ್ಟೇ ಇವೆಲ್ಲ ಜೂಜಾಟ. ಇವೆಲ್ಲವೂ ಅಪ್ಪಟ ಗ್ರಾಮೀಣ ಕ್ರೀಡೆ. ದೊಡ್ಡ ಹಬ್ಬದ ಸಾಮೂಹಿಕ ಆಚರಣೆಯು ಊರಿನ ಸಣ್ಣಪುಟ್ಟ ಜಗಳಗಳು, ವೈಮನಸ್ಸನ್ನು ಮರೆಸಿ, ಸಾಮರಸ್ಯವನ್ನು ಬೆಳಗುತ್ತದೆ. ವರ್ಷದಿಂದ ವರ್ಷಕ್ಕೆ ಕಡಬಾಳದ ದನಬೈಲು ಸಂಪ್ರದಾಯ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಊರಿನ ಪ್ರಮುಖರಾದ ಶ್ರೀಕಾಂತ ಕಡಬಾಳ, ಎನ್.ಆರ್.ಹೆಗಡೆ ಉದ್ದೇಮನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.