ADVERTISEMENT

ಕುಡಿಯುವ ನೀರು ಯೋಜನೆ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 14:48 IST
Last Updated 7 ಸೆಪ್ಟೆಂಬರ್ 2023, 14:48 IST
REUTERS/HAMAD I MOHAMMED
   REUTERS/HAMAD I MOHAMMED

ಕುಮಟಾ: ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳ 53 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಬಹು ಗ್ರಾಮ ಕುಡಿಯುವ ನೀರು ಯೋಜನೆಯನ್ನು ದೀವಳ್ಳಿಯಿಂದ ಉಪ್ಪಿನಪಟ್ಟಣ-ಬೊಗರಿಬೈಲ ಬಳಿ ಸ್ಥಳಾಂತರಿಸಬೇಕು ಎಂದು ತಾಲ್ಲೂಕಿನ ಅಘನಾಶಿನಿ ಉಳಿಸಿ ರೈತರ ಹೋರಾಟ ಸಮಿತಿ ಪದಾಧಿಕಾರಿ ಟಿ.ಪಿ. ಹೆಗಡೆ ಮೂರೂರು ಹೇಳಿದರು.

ಪಟ್ಟಣದ ಹವ್ಯಕ ಸಭಾ ಭವನದಲ್ಲಿ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕುಮಟಾ-ಹೊನ್ನಾವರ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಮರಾಕಲ್ ಯೋಜನೆಯ ಕುಡಿಯುವ ನೀರು ಅನುಷ್ಠಾನಗೊಂಡಿದ್ದು ಅಘನಾಶಿನಿ ನದಿಯ ದೀವಳ್ಳಿ ಬಳಿಯೇ ಆಗಿದೆ. ಅಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹೀಗಿರುವಾಗ ಅಲ್ಲಿಯೇ ಮತ್ತೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಆರಂಭಿಸಿದರೆ ಅಘನಾಶಿನಿ ನದಿಯ ದೀವಳ್ಳಿ, ಸಂತೆಗುಳಿ ಗ್ರಾಮದ ತೋಟ, ಕೃಷಿಗೆ ನೀರಿನ ಕೊರತೆ ಉಂಟಾಗಿ ಮುಂದೆ ಉಪ್ಪು ನೀರು ಬರುವ ಸಾಧ್ಯತೆಯೂ ಇದೆ’ ಎಂದರು.

ಸಮಿತಿಯ ಸದಸ್ಯ ಮದನ ನಾಯಕ, ಯೋಜನೆ ಸ್ಥಳಾಂತರ ಮಾಡಿ ಬೊಗರಿಬೈಲ- ಉಪ್ಪಿನಪಟ್ಟಣ ಧಕ್ಕೆ ಬಳಿ ಮಿನಿ ಆಣೆಕಟ್ಟು ನಿರ್ಮಿಸಿದರೆ ನದಿಯಲ್ಲಿ 14 ಗ್ರಾಮ ಪಂಚಾಯ್ತಿಗಳಿಗೆ ಸಾಕಾಗುವಷ್ಟು ನೀರು ಸಂಗ್ರಹವಾಗುತ್ತದೆ. ಕೃಷಿ, ಮೀನುಗಾರಿಕೆ, ಕುಡಿಯುವ ಉದ್ದೇಶಕ್ಕೆ ನೀರು ಬಳಕೆಮಾಡಿಕೊಳ್ಳಲು ಸಾಧ್ಯ. ಸೆ. 11 ರಂದು ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ಕಂದವಳ್ಳಿಯ ಸ್ಕಂದ ಮಾತಾ ದೇವಾಲಯದಲ್ಲಿ ಈ ಬಗ್ಗೆ ಚರ್ಚಿಸಲು ರೈತರ ಹಾಗೂ ಪರಿಸರ ತಜ್ಞರ ಸಭೆ ಕರೆಯಲಾಗಿದೆ ಎಂದರು.

ADVERTISEMENT

ರವಿ ಹೆಗಡೆ, ರಾಜೇಶ ಭಟ್ಟ, ಗಿರಿಯಾ ಗೌಡ, ವಿಷ್ಣು ಶಾಸ್ತ್ರಿ, ಗಜಾನನ ನಾಯ್ಕ, ಗಜಾನನ ಕೊಡಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.