
ಅಂಕೋಲಾ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಬೆಳಿಗ್ಗೆ ಎಂಟು ಗಂಟೆಗೆ ಹಾರವಾಡ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಗಡಿ ಪ್ರದೇಶವಾಗಿರುವ ಹಾರವಾಡ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬರದಿದೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಈ ಭಾಗದಿಂದ ಬೇರೆಡೆ ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸ್‌ನ್ನು ಸರಿಯಾದ ವೇಳೆಗೆ ಬರದಿದ್ದರೆ ಬಸ್ ತಡೆದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
‘ಇತ್ತೀಚೆಗೆ ಹಾರವಾಡಕ್ಕೆ ಬಿಟ್ಟಿರುವ ಸಾರಿಗೆ ಬಸ್ ತಾಂತ್ರಿಕ ದೋಷ ಅಥವಾ ಚಾಲಕನ ನಿರ್ಲಕ್ಷದಿಂದ ಬಸ್ ರಸ್ತೆ ತಪ್ಪಿ ಗದ್ದೆಗೆ ವಾಲಿರುವ ಬಸ್‌ನ್ನು ನಮ್ಮ ಗ್ರಾಮಕ್ಕೆ ಬಿಡಬೇಡಿ. ಘಟನೆ ಆದ ಮರು ದಿನವೇ ಪುನಃ ಅದೇ ಬಸ್ ಬಂದಿದ್ದರಿಂದ ಪ್ರಯಾಣಿಕರಿಗೆ ಭಯದ ವಾತವರಣ ಸೃಷ್ಟಿಯಾಗಿದೆ. ಆ ಬಸ್ ಬದಲಾಯಿಸಬೇಕು’ ಎಂದು ಮನವಿ ಸಲ್ಲಿಸಿದರು.
ಹಾರವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ ಗೌಡ, ಸದಸ್ಯರಾದ ಮಂಜುನಾಥ ಟಾಕೇಕರ್, ಶೀಲಾ ಹಾರವಾಡೇಕರ್, ಪ್ರಮುಖರಾದ ರಾಜು ಹರಿಕಂತ್ರ, ಜಯಶ್ರೀ ಹನುಮಟ್ಟಿಕರ್, ಗೀತಾ ವಿಶ್ವನಾಥ ಹರಿಕಂತ್ರ, ಯೋಗಿನಿ ಹರಿಕಂತ್ರ, ಭವಾನಿ ಹರಿಕಂತ್ರ, ಅನುಸೂಯ ಹರಿಕಂತ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.