ADVERTISEMENT

ಶಿರಸಿ: ಸಾಲಮನ್ನಾ ವಂಚಿತ ರೈತರು ಅಡಕತ್ತರಿಯಲ್ಲಿ

ತಾಲ್ಲೂಕಿನಲ್ಲಿ 1923 ರೈತರಿಗೆ ಸಿಕ್ಕಿಲ್ಲ ಸಾಲಮನ್ನಾ ಯೋಜನೆಯ ಭಾಗ್ಯ

ಸಂಧ್ಯಾ ಹೆಗಡೆ
Published 28 ಜನವರಿ 2020, 19:30 IST
Last Updated 28 ಜನವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿರಸಿ: ಕಳೆದ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ರೈತರ ಸಾಲಮನ್ನಾ ಯೋಜನೆಯಿಂದ ತಾಲ್ಲೂಕಿನ 1923 ರೈತರು ವಂಚಿತರಾಗಿದ್ದಾರೆ. ಸೌಲಭ್ಯ ಪಡೆಯಲು ಅರ್ಹರಾಗಿದ್ದರೂ, ದಾಖಲೆಯ ಕಾರಣಗಳಿಂದ ಸಾಲಮನ್ನಾ ಯೋಜನೆ ಲಭಿಸದಿರುವುದು ಅವರನ್ನು ಚಿಂತೆಗೀಡುಮಾಡಿದೆ.

ತಾಲ್ಲೂಕಿನ 28 ಸೊಸೈಟಿಗಳಲ್ಲಿ ಇಂತಹ ಹಲವು ಪ್ರಕರಣಗಳು ಬಾಕಿ ಉಳಿದಿರುವುದು ಸೊಸೈಟಿ ಪ್ರಮುಖರಿಗೂ ಸಮಸ್ಯೆ ಸೃಷ್ಟಿಸಿದೆ. ಟಿಆರ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗರಿಷ್ಠ 371 ಹಾಗೂ ಬನವಾಸಿಯಲ್ಲಿ 252 ಫಲಾನುಭವಿಗಳು ಸಾಲಮನ್ನಾಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಕೆಲವು ರೈತರ ಮಾಹಿತಿ ಸಾಲಮನ್ನಾ ತಂತ್ರಾಂಶದ ಎಫ್‌.ಎಸ್‌.ಡಿ.ಯಲ್ಲಿ ತಪ್ಪು ನೋಂದಣಿಯಾಗಿದೆ. ಇದನ್ನು ಸರಿಪಡಿಸಲು ಅವಕಾಶ ನೀಡಬೇಕು. ಕೆಲವು ರೈತರು ಸಾಲಮನ್ನಾಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಬಳಿಯಿರುವ ರೇಷನ್ ಕಾರ್ಡ್ ನೀಡಿದ್ದರು. ನಂತರ ಎಫ್‌.ಎಸ್‌.ಡಿ ಅಪ್‌ಲೋಡ್ ಮಾಡುವಾಗ ಬದಲಾದ ಹೊಸ ರೇಷನ್ ಕಾರ್ಡ್ ನೀಡಿದ್ದಾರೆ. ಇವೆರಡೂ ಮಾಹಿತಿ ತಾಳೆಯಾಗದೇ ಅವರ ಸಾಲಮನ್ನಾ ಆಗಿಲ್ಲ. ಆದರೆ, ಇವರೆಲ್ಲ ಸೌಲಭ್ಯಕ್ಕೆ ಅರ್ಹರೇ ಆಗಿದ್ದು, ಸರ್ಕಾರ ಇವರನ್ನು ಪರಿಗಣಿಸಬೇಕು ಎನ್ನುತ್ತಾರೆ ಯಡಳ್ಳಿ ಸೊಸೈಟಿ ಅಧ್ಯಕ್ಷ ಗಣಪತಿ ಹೆಗಡೆ.

ADVERTISEMENT

ಹಿಂದಿನ ಚುನಾವಣೆಯ ವೇಳೆ ರಾಜಕಾರಣಿಗಳೂ ಮನ್ನಾ ಆದ ಬೆಳೆಸಾಲ ಪಾವತಿಸಬೇಕಾಗಿಲ್ಲ ಎಂದಿದ್ದರು. ಅದರಂತೆ ರೈತರು ₹ 1ಲಕ್ಷ ಬೆಳೆಸಾಲವನ್ನು ತುಂಬಿರಲಿಲ್ಲ. ಚುನಾವಣೆಯಲ್ಲಿ ಹಿಂದಿನ ಸರ್ಕಾರ ಅಧಿಕಾರ ಕಳೆದುಕೊಂಡಿತು. ಆಗ ಸಾಲ ಪಾವತಿಸದವರಲ್ಲಿ ಕೆಲವರಿಗೆ ಮನ್ನಾ ಸೌಲಭ್ಯ ದೊರೆತಿಲ್ಲ. ಅವರಿಗೆ ಈಗ ಸರ್ಕಾರದಿಂದ ಬಡ್ಡಿಸಹಿತ ಸಾಲ ಮರುಪಾವತಿಸುವಂತೆ ಪತ್ರ ಬಂದಿದೆ. ಶೇ 12.5ರ ಬಡ್ಡಿ ರೈತರಿಗೆ ಭಾರವಾಗಿದೆ ಎನ್ನುತ್ತಾರೆ ಸಾಲೆಕೊಪ್ಪದ ಮಹೇಂದ್ರ ಹೆಗಡೆ.

‘₹ 1ಲಕ್ಷಕ್ಕೆ ಬಡ್ಡಿ ಸೇರಿ ₹ 1.20 ಲಕ್ಷ ಪಾವತಿಸುವ ಸಂದರ್ಭ ಎದುರಾಗಿದೆ. ಹಳೆಯ ಸಾಲದ ಜೊತೆಗೆ ಈ ವರ್ಷದ ಬೆಳೆಸಾಲ ಭರಣ ಮಾಡುವ ಅವಧಿಯೂ ಹತ್ತಿರ ಬಂದಿದೆ. ಮಾರ್ಚ್‌ನಿಂದ ಮೇ ಒಳಗೆ ಸಾಲ ಪಾವತಿಸಬೇಕು. ಇದು ರೈತರಿಗೆ ಮಾತ್ರವಲ್ಲ, ಸಹಕಾರ ಸಂಘಕ್ಕೂ ಹೊರೆಯಾಗಿದೆ’ ಎಂದು ಬಿಸಲಕೊಪ್ಪ ಸೊಸೈಟಿ ಅಧ್ಯಕ್ಷ ಎಸ್.ಎನ್.ಭಟ್ಟ ಅಭಿಪ್ರಾಯಪಟ್ಟರು.

*
ಸಾಲಮನ್ನಾಕ್ಕೆ ಸಂಬಂಧಿಸಿದ ಷರತ್ತುಗಳನ್ನು ಸರ್ಕಾರ ಸಡಿಲಗೊಳಿಸಿ, ಬೆಳೆ ಸಾಲ ಪಡೆದ ಎಲ್ಲ ರೈತರಿಗೂ ಯೋಜನೆಯ ಲಾಭ ಸಿಗಬೇಕು
– ಎಸ್.ಎನ್.ಭಟ್ಟ,ಬಿಸಲಕೊಪ್ಪ ಸೊಸೈಟಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.