ADVERTISEMENT

ಅಭಿವೃದ್ಧಿ ಯೋಜನೆಗೆ ₹36.87 ಕೋಟಿ ಮೀಸಲು: ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ

ಕಾರವಾರ ನಗರಸಭೆ:2026–27ನೇ ಸಾಲಿನ ಬಜೆಟ್‌ಗೆ ಡಿಸಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:28 IST
Last Updated 29 ಜನವರಿ 2026, 7:28 IST
ಕಾರವಾರ ನಗರಸಭೆಯ 2026–27ನೇ ಸಾಲಿನ ಬಜೆಟ್ ಪ್ರತಿಯನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರದರ್ಶಿಸಿದರು. ಪೌರಾಯುಕ್ತ ಜಗದೀಶ ಹುಲಗೆಜ್ಜಿ ಜತೆಗಿದ್ದರು
ಕಾರವಾರ ನಗರಸಭೆಯ 2026–27ನೇ ಸಾಲಿನ ಬಜೆಟ್ ಪ್ರತಿಯನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರದರ್ಶಿಸಿದರು. ಪೌರಾಯುಕ್ತ ಜಗದೀಶ ಹುಲಗೆಜ್ಜಿ ಜತೆಗಿದ್ದರು   

ಕಾರವಾರ: 2026-27ನೇ ಸಾಲಿಗೆ ಕಾರವಾರ ನಗರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ₹36.87 ಕೋಟಿ ವೆಚ್ಚ ಮಾಡುವ ಜೊತೆಗೆ ₹21.43 ಲಕ್ಷ ಉಳಿತಾಯದ ಬಜೆಟ್‌ಗೆ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅನುಮೋದಿಸಿದ್ದಾರೆ.

ಆಡಳಿತ ಮಂಡಳಿ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಬಜೆಟ್‌ ಪ್ರತಿಗೆ ಅನುಮೋದನೆ ನೀಡಿದ ಅವರು ಮುಂಬರುವ ಆರ್ಥಿಕ ವರ್ಷಕ್ಕೆ ನಗರಸಭೆಯು ₹37.09 ಕೋಟಿ ಆದಾಯ ಸಂಗ್ರಹದ ನಿರೀಕ್ಷೆ ಹೊಂದಿರುವುದಾಗಿ ಘೋಷಿಸಿದ್ದಾರೆ.

‘ನಗರ ವ್ಯಾಪ್ತಿಯಲ್ಲಿ ಹೊಸ ರಸ್ತೆಗಳ ನಿರ್ಮಾಣಕ್ಕೆ ₹2.92 ಕೋಟಿ, ಚರಂಡಿ ನಿರ್ಮಾಣ ಮತ್ತು ಸ್ಲ್ಯಾಬ್‌ ಅಳವಡಿಕೆಗೆ ₹2.62 ಕೋಟಿ, ಬೀದಿದೀಪಗಳ ನಿರ್ವಹಣೆ ಮತ್ತು ಕಂಬಗಳ ಸ್ಥಳಾಂತರಕ್ಕೆ ₹2.65 ಕೋಟಿ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅಡಿ ಕಟ್ಟಡ ನಿರ್ಮಾಣಕ್ಕೆ ₹1.14 ಕೋಟಿ ಮೀಸಲಿರಿಸಲಾಗಿದೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಹೊರಗುತ್ತಿಗೆ ಆಧಾರದಲ್ಲಿ ಲೋಡರ್ಸ್, ವಾಹನ ಚಾಲಕ, ವಾಚ್‌ಮನ್ ಪೂರೈಕೆಗೆ ₹1.63 ಕೋಟಿ, ಬೀದಿದೀಪಗಳ ವಿದ್ಯುತ್ ವೆಚ್ಚಕ್ಕೆ ₹1.60 ಕೋಟಿ, ನಗರ ನೀರು ಸರಬರಾಜು ಮಂಡಳಿಗೆ ನೀರಿನ ಶುಲ್ಕ ಪಾವತಿಗೆ ₹1 ಕೋಟಿ, ಕಾಯಂ ಸಿಬ್ಬಂದಿ ವೇತನಕ್ಕೆ ₹5.06 ಕೋಟಿ ಮೀಸಲಿಡಲಾಗಿದೆ.

ಉಪಕರಣಗಳ ನಿರ್ವಹಣೆ ವೆಚ್ಚ ಸೇರಿದಂತೆ ಅಸಾಧಾರಾಣ ವೆಚ್ಚಗಳಿಗೆ ₹4.07 ಕೋಟಿ, ವಾಹನಗಳಿಗೆ ಇಂಧನ ಪೂರೈಕೆಗೆ ₹75 ಲಕ್ಷ, ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ನೇಮಕಕ್ಕೆ ₹15 ಲಕ್ಷ, ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ₹20 ಲಕ್ಷ ಮೀಸಲಿರಿಸಲಾಗಿದೆ.

ಉದ್ದಿಮೆ ನಿಧಿ ಪಾಲು ಹೆಚ್ಚು

‘ಆಸ್ತಿ ತರಿಗೆಯಿಂದ ₹5.20 ಕೋಟಿ ಅನಧಿಕೃತ ಆಸ್ತಿಗಳಿಂದ ದಂಡ ರೂಪದಲ್ಲಿ ಸಂಗ್ರಹವಾದ ತೆರಿಗೆಯಿಂದ ₹70 ಲಕ್ಷ ಲೀಸ್ ಬಾಡಿಗೆಯಿಂದ ₹78 ಲಕ್ಷ ಸೇರಿದಂತೆ ಸಾಮಾನ್ಯ ನಿಧಿಗಳ ಮೂಲಕ ₹10.31 ಕೋಟಿ ಉದ್ದಿಮೆ ನಿಧಿಗಳಿಂದ ₹12.08 ಕೋಟಿ ನೀರು ಸರಬರಾಜು ನಿಧಿಯಿಂದ ₹1.51 ಕೋಟಿ 15ನೇ ಹಣಕಾಸು ಅನುದಾನದಲ್ಲಿ ₹5.78 ಕೋಟಿ ಸೇರಿದಂತೆ ₹37.09 ಕೋಟಿ ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.