ADVERTISEMENT

ಮುರುಕು ಗಾಡಿಯಲ್ಲಿ ಹರಕು ಸಾಮಗ್ರಿ

ಮನೆ–ಮನೆ ಕಸ ಸಂಗ್ರಹಿಸುವ ಹಳೇ ವಾಹನಕ್ಕೆ ಬೇಕಿದೆ ಮುಕ್ತಿ

ಸಂಧ್ಯಾ ಹೆಗಡೆ
Published 3 ನವೆಂಬರ್ 2019, 19:30 IST
Last Updated 3 ನವೆಂಬರ್ 2019, 19:30 IST
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಮದ್ಯದ ಬಾಟಲಿ ರಾಶಿ
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಮದ್ಯದ ಬಾಟಲಿ ರಾಶಿ   

ಗುಜರಿ ಅಂಗಡಿ ಸೇರಲು ಅರ್ಹವಾಗಿರುವ ವಾಹನಗಳು ನಿತ್ಯ ಮನೆ–ಮನೆ ಕಸ ಸಂಗ್ರಹಿಸಲು ಬರುತ್ತವೆ. ವಾಹನಗಳ ದುಃಸ್ಥಿತಿ, ಅದನ್ನು ಓಡಿಸಲು ಚಾಲಕರು ಪಡುವ ಪ್ರಯಾಸದ ಬಗ್ಗೆ ಬೆಳಕು ಚೆಲ್ಲಿದೆ ಈ ಬರಹ.

ಶಿರಸಿ: ಸ್ಪೀಕರ್‌ನಲ್ಲಿ ದೊಡ್ಡದಾಗಿ ಹಾಡು ಹಾಕಿಕೊಂಡು ಬರುವ ಈ ವಾಹನ ಗುಂಯ್‌ss ಗುಡುತ್ತ ಹೊರಡಿಸುವ ಕರ್ಕಶ ಸದ್ದು, ಹಾಡಿನ ದನಿಯನ್ನೂ ಅಡಗಿಸುತ್ತದೆ. ಏರು ಹತ್ತಲಾಗದೇ ಒದ್ದಾಡುವ ವಾಹನದ ಕೂಗು ಚಾಲಕನಿಗೆ ಮಾತ್ರ ಕೇಳುತ್ತದೆ. ಅಸಹಾಯಕನಾಗಿರುವ ಚಾಲಕ ಅದನ್ನು ಅಲ್ಲಿಯೇ ಸುಮ್ಮನಿರಿಸಿ, ಮುಂದಕ್ಕೆ ಎಳೆದುಕೊಂಡು ಹೋಗುತ್ತಾನೆ !

ಇದು ಮನೆಗಳಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹಿಸಲು ನಗರಸಭೆ ವಾಹನದ ದುಃಸ್ಥಿತಿ. ಹಾಳಾದ ಸೈಲೆನ್ಸರ್, ಬಂಪರ್‌, ಮಡ್‌ಗಾರ್ಡ್‌ ಇಲ್ಲದ ಗಾಡಿಯನ್ನು ನೋಡಿದರೆ ಆಗ ತಾನೆ ಗುಜರಿ ಅಂಗಡಿಯಿಂದ ಅದನ್ನು ತಂದಂತೆ ಕಾಣುತ್ತದೆ. ಡ್ರೈವರ್ ಮತ್ತು ಲೋಡರ್ ಇಬ್ಬರೂ ಕುಳಿತುಕೊಳ್ಳುವ ಕಡೆ, ಬಾಗಿಲಿಗೆ ಕುಣಿಕೆ (ಲಾಕ್‌)ಯಿಲ್ಲ. ರಬ್ಬರ್ ಕಟ್ಟಿಕೊಂಡು ಅವರು ಕುಳಿತುಕೊಳ್ಳುತ್ತಾರೆ. ರಸ್ತೆಯಲ್ಲಿ ಹೊಂಡ ದಾಡುವ ಭರದಲ್ಲಿ ರಬ್ಬರ್ ಕುಣಿಕೆ ತಪ್ಪಿದರೆ, ಸೀಟಿನಲ್ಲಿ ಕುಳಿತವರು ಕೆಳಗೆ ಬೀಳುವ ಪರಿಸ್ಥಿತಿ. ಕೆಲ ದಿನಗಳ ಹಿಂದೆ ಲೋಡರ್ ಒಬ್ಬರು ಚಲಿಸುತ್ತಿದ್ದ ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಇದು ಮೊದಲ ಪ್ರಕರಣವೇನು ಅಲ್ಲ. ಅನೇಕ ಬಾರಿ ಇವು ಮರುಕಳಿಸಿವೆ.

ADVERTISEMENT

ಮನೆ–ಮನೆ ಕಸ ಸಂಗ್ರಹಿಸಲು ನಗರಸಭೆ ಒಟ್ಟು ಒಂಬತ್ತು ಗಾಡಿಗಳನ್ನು ಓಡಿಸುತ್ತಿತ್ತು. ಅವುಗಳಲ್ಲಿ ಎರಡು ಈಗಾಗಲೇ ಗುಜರಿಯಂಗಡಿ ಸೇರಿವೆ. ಇನ್ನುಳಿದ ಏಳರಲ್ಲಿ ನಾಲ್ಕು ವಾಹನಗಳು ಚಾಲಕರ ಚಾಣಾಕ್ಷತನದಿಂದಷ್ಟೇ ಓಡುತ್ತಿವೆ. ಚಾಲಕರಿಗೆ ಈ ಸವಾಲಾದರೆ, ಲೋಡರ್‌ಗಳಿಗೆ ಇನ್ನೊಂದು ಸವಾಲು. ವಾಹನದ ಒಳಗೆ ಹಸಿ ಕಸ ಮತ್ತು ಒಣ ಕಸ ಹಾಕುವ ವಿಭಾಗಗಳಿವೆ. ಇನ್ನುಳಿದ ಎಲೆಕ್ಟ್ರಾನಿಕ್ ತ್ಯಾಜ್ಯ, ಬಾಟಲಿ, ಸ್ಯಾನಿಟರಿ ನ್ಯಾಪಕಿನ್, ಗುಜರಿ ವಸ್ತುಗಳನ್ನು ವಾಹನದ ಹೊರ ಆವರಣದಲ್ಲಿ ಕಟ್ಟಿರುವ ಚೀಲದಲ್ಲಿ ಹಾಕಬೇಕು.

‘ಈ ಗೂಡ್ಸ್ ರಿಕ್ಷಾದ ಸುತ್ತಲೂ ಚೀಲಗಳು ಜೋತಾಡುತ್ತಿರುತ್ತವೆ. ಈ ಅರೆಬರೆ ಹರಿದ ಚೀಲಗಳಿಂದ ಕೆಲವೊಮ್ಮೆ ಹಾಕಿದ ಕಸ ಅಲ್ಲಿಯೇ ಬಿದ್ದಿರುತ್ತದೆ. ತುಂಬಿ ತುಳುಕುವ ವಾಹನದಿಂದ ಹಸಿ ತ್ಯಾಜ್ಯಗಳೂ ಅನೇಕ ಬಾರಿ ರಸ್ತೆಯ ಮಧ್ಯ ಬೀಳುತ್ತ ಹೋಗುತ್ತವೆ. ಇದು ಇಡೀ ರಸ್ತೆಯ ತುಂಬ ದುರ್ನಾತ ಬೀರುತ್ತದೆ’ ಎನ್ನುತ್ತಾರೆ ಗೃಹಿಣಿ ವಿದ್ಯಾನಗರದ ಸುರೇಖಾ.

‘ಸಾರ್ವಜನಿಕರಲ್ಲಿ ಕೆಲವು ಪ್ರಜ್ಞಾವಂತರು ಮಾತ್ರ ಕಸವನ್ನು ವಿಂಗಡಿಸಿ ಕೊಡುತ್ತಾರೆ. ಇನ್ನುಳಿದವರು ಹಸಿ ಮತ್ತು ಒಣ ಕಸಗಳನ್ನು ಮಾತ್ರ ಪ್ರತ್ಯೇಕಿಸಿಡುತ್ತಾರೆ. ಎಲ್ಲವನ್ನೂ ಸೇರಿಸಿಕೊಂಡು ಹೋದರೆ, ಘನತ್ಯಾಜ್ಯ ವಿಲೇವಾರಿ ಘಟಕದ ಎದುರು ನಮ್ಮ ವಾಹನವನ್ನು ಅಡ್ಡಹಾಕುತ್ತಾರೆ. ಅಲ್ಲಿ ಪ್ರತಿ ತ್ಯಾಜ್ಯವನ್ನು ಪ್ರತ್ಯೇಕಿಸಿಕೊಂಡು ನಾವು ಒಳಗೆ ಹೋಗಬೇಕು’ ಎಂಬುದು ಲೋಡರ್‌ಗಳ ಅಳಲು.

ವಾಹನದ ದುಃಸ್ಥಿತಿಯಿಂದ ಆರು ತಾಸಿನಲ್ಲಿ ಮುಗಿಯುವ ಕಸ ಸಂಗ್ರಹ ಕೆಲಸಕ್ಕೆ 8–10 ತಾಸು ಸಮಯ ಬೇಕಾಗುತ್ತದೆ. ಎಷ್ಟು ಪ್ರಯತ್ನಿಸಿದರೂ ವಾಹನ ಜಗ್ಗುವುದಿಲ್ಲ. ಎಳೆದುಕೊಂಡು ಹೋದ ಹಾಗೆ ಚಾಲನೆ ಮಾಡಬೇಕು ಎಂದು ಚಾಲಕರೊಬ್ಬರು ಹೇಳಿಕೊಂಡರು.

‘ಕಸ ಸಂಗ್ರಹಣೆಯ ವಾಹನಗಳಲ್ಲಿ ಕೆಲವು ಹಳೆಯ ಮಾಡೆಲ್‌ಗಳಿವೆ. ಅವು ದುರಸ್ತಿ ಮಾಡುವ ಸ್ಥಿತಿಯಲ್ಲಿ ಇಲ್ಲ. ದುರಸ್ತಿ ಮಾಡಿದರೆ ವೆಚ್ಚ ಅಧಿಕವಾಗುತ್ತದೆ. 10 ಗಾಡಿ ಖರೀದಿಸಲು ಅನುಮತಿ ದೊರೆತಿದ್ದು, ಸದ್ಯ ಎರಡು ವಾಹನಗಳಿಗೆ ಟೆಂಡರ್ ಕರೆಯಲಾಗಿದೆ. ಇನ್ನುಳಿದ ವಾಹನಗಳಿಗೂ ಸದ್ಯದಲ್ಲಿ ಟೆಂಡರ್ ಕರೆಯಲಾಗುತ್ತದೆ. ಹೊಸ ವಾಹನಗಳು ಬಂದ ಮೇಲೆ, ಹಳೆಯದರಲ್ಲಿ ದುರಸ್ತಿಗೆ ಸಾಧ್ಯವಿರುವ ವಾಹನವನ್ನು ದುರಸ್ತಿಗೊಳಿಸಲಾಗುವುದು’ ಎಂದು ನಗರಸಭೆ ಪರಿಸರ ಎಂಜಿನಿಯರ್ ಶಿವರಾಜ ಬಿ.ಕೆ ಪ್ರತಿಕ್ರಿಯಿಸಿದರು.


‘ಪ್ರಸ್ತುತ ಇರುವ ವಾಹನವು 850 ಕೆ.ಜಿ.ಯಿಂದ ಒಂದು ಟನ್ ತ್ಯಾಜ್ಯ ಹೊರುವ ಸಾಮರ್ಥ್ಯ ಹೊಂದಿದೆ. ಒಂದು ವಾಹನ ನಿತ್ಯ ಎರಡು ವಾರ್ಡ್‌ಗಳಲ್ಲಿ ಸಂಚರಿಸುತ್ತದೆ. ಒಂದು ವಾರ್ಡ್‌ನಲ್ಲಿ ಕಸ ಸಂಗ್ರಹ ಮುಗಿದ ಮೇಲೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅದನ್ನು ಅನ್‌ಲೋಡ್ ಮಾಡಿ ಮತ್ತೆ ಬರುತ್ತದೆ. ಹೊಸ ವಾಹನ ಬಂದ ಮೇಲೆ ಅದರೊಳಗೆ ಹೆಚ್ಚುವರಿ ವಿಭಾಗ ಮಾಡುವ ಯೋಚನೆಯಿದೆ. ಆಗ ಹೊರ ಆವರಣದಲ್ಲಿ ಚೀಲ ಹಾಕುವ ಅಗತ್ಯ ಬರುವುದಿಲ್ಲ’ ಎಂದು ಅವರು ವಿವರಿಸಿದರು.

ಜಾಗೃತಿಯೆಡೆಗೆ ಜನರು: ‘ಜನರಲ್ಲಿ ತಕ್ಕಮಟ್ಟಿಗಿನ ಜಾಗೃತಿ ಮೂಡಿದೆ. ಶೇ 90ರಷ್ಟು ಜನರು ಹಸಿ–ಒಣ ಕಸ ಪ್ರತ್ಯೇಕಿಸಿಕೊಡುತ್ತಾರೆ. ಗಣೇಶನಗರ ಹೊರತುಪಡಿಸಿ, ಇನ್ನುಳಿದ ಎಲ್ಲ ಬಡಾವಣೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಹಸಿ ಕಸ ಸಿಗುತ್ತದೆ. ದಿನಕ್ಕೆ 16 ಟನ್ ಒಣ ಕಸ, 14ಟನ್‌ನಷ್ಟು ಹಸಿ ಕಸ ಸಂಗ್ರಹವಾಗುತ್ತದೆ. ಹಸಿ ಕಸ ಬಳಸಿ ಎರೆಹುಳು ಗೊಬ್ಬರ ತಯಾರಿಸಲಾಗುತ್ತದೆ. ಒಣ ಕಸದಲ್ಲಿ ಬಾಟಲಿ, ಕಬ್ಬಿಣ, ಎಲೆಕ್ಟ್ರಾನಿಕ್ ಸಾಮಗ್ರಿ ಎಲ್ಲವನ್ನೂ ಪ್ರತ್ಯೇಕಿಸಿ, ಮರುಬಳಕೆಯ ಸಾಮಗ್ರಿಗಳ ಹರಾಜು ಮಾಡಲಾಗುತ್ತದೆ. ಇದರಿಂದ ತಿಂಗಳಿಗೆ ಸರಾಸರಿ ₹8000 ಆದಾಯ ಬರುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾರಿಬ್ಯಾಗ್ ನಿಷೇಧಗೊಂಡ ಮೇಲೆ ಒಂದು ಟನ್‌ನಷ್ಟು ಕ್ಯಾರಿಬ್ಯಾಗ್ ತ್ಯಾಜ್ಯ ಕಡಿಮೆ ಬರುತ್ತಿದೆ. ಆದರೆ, ಗೋಧಿಹಿಟ್ಟು, ಉಪ್ಪು, ಕಾಳು–ಬೇಳೆ, ತಿನಿಸುಗಳಪ್ಯಾಕ್ ಆಗಿರುವ ಬರುವ ಪ್ಲಾಸ್ಟಿಕ್ ಕವರ್‌ಗಳ ಪ್ರಮಾಣ ಕೊಂಚವೂ ಕಡಿಮೆಯಾಗಿಲ್ಲ. ಬೀದಿ ಸ್ವಚ್ಛತೆಗೆ 700 ಜನರಿಗೆ ಒಬ್ಬರಂತೆ, ಶಿರಸಿ ನಗರಕ್ಕೆ 100 ಪೌರಕಾರ್ಮಿಕರ ಅಗತ್ಯವಿದೆ. 48 ಪೌರಕಾರ್ಮಿಕರು ಈ ಕೆಲಸವನ್ನು ನಿಭಾಯಿಸುತ್ತಿದ್ದಾರೆ’ ಎನ್ನುತ್ತಾರೆ ಆರೋಗ್ಯ ನಿರೀಕ್ಷಕ ಆರ್.ಎಂ.ವೆರ್ಣೇಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.