ಕಾರವಾರ: ‘ಮಳೆಗಾಲಕ್ಕೂ ಮುನ್ನ ಶಾಲೆ ಕೊಠಡಿಗಳು, ಸರ್ಕಾರಿ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಕಚ್ಚಾ ಮನೆಗಳ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಳ್ಳಬೇಕು. ಅವಘಡ ಘಟಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಮುಂಗಾರು ಸಿದ್ಧತೆಗೆ ಕೈಗೊಂಡಿರುವ ಕ್ರಮಗಳ ಕುರಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.
‘ಕಳೆದ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಭೂ ಕುಸಿತ, ಮನೆ ಕುಸಿತದಿಂದ ವ್ಯಾಪಕ ಹಾನಿಯಾಗಿದೆ. ಜೀವ ಹಾನಿಯೂ ಸಂಭವಿಸಿದೆ. ಈ ಬಾರಿ ಅಂತಹ ತಪ್ಪು ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಸೂಚಿಸಿದರು.
‘ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಪ್ರತಿ ತಹಶೀಲ್ದಾರ್ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಂಡಿರುವ ರಸ್ತೆ ಕಾಮಗಾರಿಗಳನ್ನು ಈ ತಿಂಗಳೊಳಗೆ ಮುಕ್ತಾಯಗೊಳಿಸಬೇಕು. ರಸ್ತೆಗಳ ಪಕ್ಕದ ಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಎಚ್ಚರವಹಿಸಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಡಿಸಿಎಫ್ ಸಿ. ರವಿಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಇದ್ದರು.
‘ಹೆದ್ದಾರಿ: ರಕ್ಷಣಾ ಕ್ರಮ ಕೈಗೊಳ್ಳಿ’
‘ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಈಗಾಗಲೇ ಗುರುತಿಸಿರುವ ಗುಡ್ಡ ಕುಸಿತ ಪ್ರದೇಶದಲ್ಲಿ ಸ್ಪಾಟರ್ಸ್‌ಗಳನ್ನು ನೇಮಕ ಮಾಡಿ ನಿರಂತರವಾಗಿ ನಿಗಾ ವಹಿಸಬೇಕು. ಹೆದ್ದಾರಿಯಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕ ಬ್ಯಾರಿಕೇಡ್ ಸೇರಿದಂತೆ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
‘ಹಳ್ಳ ಕಾಲುಸಂಕ ಸೇರಿದಂತೆ ಅಪಾಯಕಾರಿ ಪ್ರದೇಶಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಕಡಿತವಾದಲ್ಲಿ ತುರ್ತು ಮರು ಸಂಪರ್ಕಕ್ಕೆ ಅಗತ್ಯವಿರುವ ಉಪಕರಣಗಳು ವಾಹನಗಳು ಮತ್ತು ಸಿಬ್ಬಂದಿ ಸಿದ್ದವಾಗಿ ಇಟ್ಟುಕೊಂಡಿರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.