ADVERTISEMENT

ಅಡಿಕೆಗೆ ಕೊಳೆರೋಗ, ಜೋಳ ಬೆಳವಣಿಗೆಗೆ ಕಂಟಕ

ಶಿರಸಿ ತಾಲ್ಲೂಕಿನಾದ್ಯಂತ ನಿರಂತರ ಮಳೆಯ ಪರಿಣಾಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 15:41 IST
Last Updated 12 ಸೆಪ್ಟೆಂಬರ್ 2022, 15:41 IST
ಶಿರಸಿ ತಾಲ್ಲೂಕಿನ ಕಾಳಂಗಿಯ ನಾಗಪ್ಪ ದೊಡ್ಮನಿ ಎಂಬುವವರ ತೊಟದಲ್ಲಿ ಕೊಳೆರೋಗದಿಂದ ಉದುರಿರುವ ಅಡಿಕೆ ಕಾಯಿಗಳು.
ಶಿರಸಿ ತಾಲ್ಲೂಕಿನ ಕಾಳಂಗಿಯ ನಾಗಪ್ಪ ದೊಡ್ಮನಿ ಎಂಬುವವರ ತೊಟದಲ್ಲಿ ಕೊಳೆರೋಗದಿಂದ ಉದುರಿರುವ ಅಡಿಕೆ ಕಾಯಿಗಳು.   

ಶಿರಸಿ: ತಾಲ್ಲೂಕಿನಾದ್ಯಂತ ವಾಡಿಕೆಗೆ ಮೀರಿ ಮಳೆ ಸುರಿಯುತ್ತಿರುವ ಪರಿಣಾಮ ತೋಟಗಾರಿಕೆ, ಕೃಷಿ ಬೆಳೆಗಳ ಇಳುವರಿ ಮೇಲೆ ಅಡ್ಡ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಪೂರ್ವಭಾಗ ಬನವಾಸಿ, ಅಜ್ಜರಣಿ, ತಿಗಣಿ, ಕಾಳಂಗಿ, ಹೆಬ್ಬತ್ತಿ, ಬಿಸಲಕೊಪ್ಪ, ಮಳಲಗಾಂವ ಸೇರಿದಂತೆ ಹಲವೆಡೆ ಅಡಿಕೆಗೆ ಕೊಳೆರೋಗ ಬಾಧಿಸಿದೆ. ಅಲ್ಲದೆ ಜೋಳದ ತೆನೆ ಬೆಳವಣಿಗೆಗೂ ಜಿಟಿ ಜಿಟಿ ಮಳೆ ಅಡ್ಡಿಯಾಗಿದೆ. ಇದರಿಂದ ಫಸಲು ಕಳೆದುಕೊಳ್ಳುವ ಆತಂಕದಲ್ಲಿ ರೈತರಿದ್ದಾರೆ.‌

ಪಶ್ಚಿಮ ಭಾಗದ ಹಲವೆಡೆಯೂ ಅಡಿಕೆಗೆ ಕೊಳೆರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಲು ನಿರಂತರ ಮಳೆ ಅಡ್ಡಿ ಮಾಡಿದೆ. ಇದರಿಂದ ರೋಗ ಉಲ್ಬಣಗೊಳ್ಳುತ್ತಿದ್ದು ನೂರಾರು ಎಕರೆ ತೋಟದಲ್ಲಿ ಅಡಿಕೆ ಮಿಳ್ಳೆಗಳು ಉದುರತೊಡಗಿವೆ.

ADVERTISEMENT

‘ಅತಿವೃಷ್ಟಿಯಿಂದ ಜೋಳ ಬಿತ್ತನೆಗೆ ವಿಳಂಬವಾಯಿತು. ತೆನೆ ಮೂಡುವ ಸಮಯದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಜೋಳದ ತೆನೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಪ್ರತಿ ಎಕರೆಗೆ 30 ಕ್ವಿಂಟಲ್ ಫಸಲು ಬೆಳೆಯುತ್ತಿದ್ದ ಜಾಗದಲ್ಲಿ ಈ ಬಾರಿ 10 ಕ್ವಿಂಟಲ್ ಬೆಳೆ ದೊರೆಯುವುದು ಅನುಮಾನ’ ಎಂದು ರೈತ ರಾಘವೇಂದ್ರ ನಾಯ್ಕ ಕಿರವತ್ತಿ ಹೇಳಿದರು.

‘ಅಡಿಕೆ ಕೊಳೆರೋಗ ಬಾಧಿಸಿದ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ರೈತರು ಇನ್ನೊಂದು ಸುತ್ತು ಬೋರ್ಡೊ ದ್ರಾವಣ ಅಥವಾ ಮೆಟಲಾಕ್ಸಿಲ್ ಎಂ.ಝಡ್. ದ್ರಾವಣ ಸಿಂಪಡಿಸಲು ಸೂಚಿಸಲಾಗುತ್ತಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಹೆಗಡೆ ತಿಳಿಸಿದರು.

ನಿರಂತರ ಮಳೆಯಿಂದ ಅಡಿಕೆ ಬೆಳೆಗೆ ವ್ಯಾಪಕ ಹಾನಿ ಉಂಟಾಗಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

ದ್ಯಾಮಣ್ಣ ದೊಡ್ಮನಿ

ಕಾಳಂಗಿ ಸೇವಾ ಸಹಕಾರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.