ADVERTISEMENT

ವಿಪತ್ತು ನಿರ್ವಹಣೆಗೆ ಡ್ರೋಣ್ ಕ್ಯಾಮೆರಾ ಖರೀದಿ: ಡಿ.ಸಿ

ದೋಣಿ, ವಿಕಿರಣ ಮಾಪನ ಯಂತ್ರ ಖರೀದಿಗೆ ₹ 50 ಲಕ್ಷ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 7:26 IST
Last Updated 18 ಜುಲೈ 2019, 7:26 IST

ಕಾರವಾರ:ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಜಿಲ್ಲಾಡಳಿತ ಖರೀದಿಸಲಿದೆ. ಇದರಲ್ಲಿ ಒಂದು ಡ್ರೋಣ್ ಕ್ಯಾಮೆರಾ, ವಿಕಿರಣ ಮಾಪನ ಯಂತ್ರ, ಮೋಟಾರ್ ಚಾಲಿತದೋಣಿ ಹಾಗೂ ಇತರ ಅಗತ್ಯ ಸಲಕರಣೆಗಳು ಇರಲಿವೆ.

ಈ ಬಗ್ಗೆ ಬುಧವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಸಲಕರಣೆಗಳ ಖರೀದಿಗೆಂದುರಾಜ್ಯ ಸರ್ಕಾರವು ₹ 50 ಲಕ್ಷ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಇದಕ್ಕೆವಿಶೇಷ ಮುತುವರ್ಜಿ ವಹಿಸಿದ್ದಾರೆ. ವಿವಿಧ ರಕ್ಷಣಾ ಸಲಕರಣೆಗಳನ್ನು ಖರೀದಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.

‘ವಿಪತ್ತು ನಿರ್ವಹಣೆಯ ಸಂದರ್ಭದಲ್ಲಿ ಡ್ರೋಣ್ ಕ್ಯಾಮೆರಾದ ಅಗತ್ಯದ ಬಗ್ಗೆ ಪೊಲೀಸ್ ಇಲಾಖೆಯಿಂದ ಬೇಡಿಕೆ ಇತ್ತು. ಅದಕ್ಕಾಗಿ ಗುಣಮಟ್ಟದ ಚಿತ್ರೀಕರಣ ಮಾಡುವ ಸುಸಜ್ಜಿತ ಡ್ರೋಣ್ ಕ್ಯಾಮೆರಾವನ್ನು₹ 13 ಲಕ್ಷದಲ್ಲಿಖರೀದಿಸಲಾಗುತ್ತಿದೆ. ಅದನ್ನು ಪೊಲೀಸ್ ಇಲಾಖೆಯ ನಿರ್ವಹಣೆಗೆ ನೀಡಲಾಗುವುದು. ನದಿ ಅಥವಾ ನೀರಿನ ಅವಘಡಗಳ ಸಂದರ್ಭದಲ್ಲಿ ಇನ್‍ಫ್ಲೇಟ್ ಬೋಟ್ (ಗಾಳಿ ತುಂಬಿದ ದೋಣಿ) ಅಗತ್ಯವಿತ್ತು. ಸುಮಾರು ₹ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅದನ್ನು ಖರೀದಿಸಲಾಗುತ್ತಿದೆ’ಎಂದು ಅವರು ವಿವರಿಸಿದರು.

ADVERTISEMENT

‘ಕೈಗಾ ಅಣುವಿದ್ಯುತ್ ಸ್ಥಾವರದ ಸುತ್ತಮುತ್ತಲ ಪ್ರದೇಶದಲ್ಲಿ ವಿಕಿರಣಕ್ಕೆ ಸಂಬಂಧಿಸಿದಂತೆ ಕೆಲವು ವದಂತಿಗಳು ಆಗಾಗ ಕೇಳಿಬರುತ್ತವೆ.ಸ್ಥಾವರದ ನಿರ್ವಹಣೆಯಲ್ಲಿ ವಿಕಿರಣ ಸೋರಿಕೆಯಂತಹ ಯಾವುದೇ ಅವಘಡಗಳೂಸಾಧ್ಯವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿಕಿರಣ ಮಾಪನ ಯಂತ್ರವನ್ನು ಖರೀದಿಸಲಾಗುತ್ತಿದೆ’ಎಂದು ಅವರು ತಿಳಿಸಿದರು.

ಉಳಿದಂತೆಜೀವರಕ್ಷಕಜಾಕೆಟ್‍ಗಳು, ತುರ್ತು ಚಿಕಿತ್ಸಾ ಕಿಟ್‍ಗಳು ಸೇರಿದಂತೆ ವಿವಿಧ ರಕ್ಷಣಾ ಸಲಕರಣೆಗಳನ್ನು ಖರೀದಿಸಲಾಗುತ್ತಿದೆ. ಈಗಾಗಲೇಟೆಂಡರ್ ಪ್ರಕ್ರಿಯೆ ಮುಗಿದಿದೆ. ಆ.15ರ ಹೊತ್ತಿಗೆ ಖರೀದಿ ಪ್ರಕ್ರಿಯೆ ಮುಗಿದು ವಿಪತ್ತು ನಿರ್ವಹಣಾ ವಿಭಾಗದಲ್ಲಿ ಸೇರ್ಪಡೆಯಾಗಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.