ADVERTISEMENT

ಎಸ್.ಎಂ.ಎಸ್.ನಲ್ಲಿ ಜಲಾಶಯದ ಮಾಹಿತಿ

ಮುಂಗಾರು ಅವಧಿಯಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ವಿವಿಧ ಕ್ರಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 13:48 IST
Last Updated 10 ಜೂನ್ 2022, 13:48 IST
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾರವಾರದಲ್ಲಿ ಶುಕ್ರವಾರ ವಿವರಿಸಿದರು. ಕದ್ರಾ ಕೆ.ಪಿ.ಸಿ.ಎಲ್ ಕಾರ್ಯಪಾಲಕ ಎಂಜಿನಿಯರ್ (ಸಿವಿಲ್) ಎಸ್.ಓಂಪ್ರಕಾಶ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಇದ್ದಾರೆ
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಾರವಾರದಲ್ಲಿ ಶುಕ್ರವಾರ ವಿವರಿಸಿದರು. ಕದ್ರಾ ಕೆ.ಪಿ.ಸಿ.ಎಲ್ ಕಾರ್ಯಪಾಲಕ ಎಂಜಿನಿಯರ್ (ಸಿವಿಲ್) ಎಸ್.ಓಂಪ್ರಕಾಶ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಇದ್ದಾರೆ   

ಕಾರವಾರ: ‘ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಕದ್ರಾ ಜಲಾಶಯದ ನೀರಿನ ಮಟ್ಟ, ಹೊರಬಿಡುತ್ತಿರುವ ನೀರಿನ ಪ್ರಮಾಣದ ಕುರಿತು ಅಗತ್ಯ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ತಿಳಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯಗಳ ಒಳಹರಿವು ಆಧರಿಸಿ ನೀರಿನ ಮಟ್ಟವನ್ನು ನಿಭಾಯಿಸಬೇಕು. ಜನರ ಸುರಕ್ಷತೆ ದೃಷ್ಟಿಯಿಂದ ನೀರಿನ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ’ ಎಂದರು.

‘ಜಿಲ್ಲೆಯಾದ್ಯಂತ ಬಿ.ಎಸ್.ಎನ್.ಎಲ್‌. ಮೂಲಕ ಸಿಗ್ನಲ್ ವೃದ್ಧಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ಕದ್ರಾ, ಕೊಡಸಳ್ಳಿ, ಗೇರುಸೊಪ್ಪ ಭಾಗದಲ್ಲಿ ಟವರ್‌ಗಳು ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಜಲಾಶಯದ ಜಲಾನಯನ ಪ್ರದೇಶದ ಮಳೆಯ ಪ್ರಮಾಣ ಮುಂತಾದ ಮಾಹಿತಿಯನ್ನು ಒಂದೇ ಕಡೆ ಸಿಗುವಂತೆ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಡ್ಯಾಶ್ ಬೋರ್ಡ್ ಮಾಡಲಾಗಿದೆ. ಅಗತ್ಯ ಸುರಕ್ಷತಾ ಕಾರ್ಯವನ್ನು ಕೈಗೊಳ್ಳಲು ಸಿಬ್ಬಂದಿ, ಸಾಮಗ್ರಿ ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಮಳೆಯಿಂದಾಗಿ ಆಗಬಹುದಾದ ಸಮಸ್ಯೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸಂವಹನ ಮಾಧ್ಯಮಗಳನ್ನು ಬಳಸಿಕೊಂಡು ಜನರಿಗೆ ಬೇಕಾದ ಮಾಹಿತಿಯನ್ನು ಒದಗಿಸಬೇಕು. ಪ್ರವಾಹ ಸಂದರ್ಭದಲ್ಲಿ ಮುಳುಗಡೆಯಾಗುವ, ಹಾನಿಗೊಳಗಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

‘ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ತುರ್ತು ನಿರ್ವಹಣೆಗೆ ಎಲ್ಲ ಸಂಪನ್ಮೂಲಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿಯ ಮಾಹಿತಿ ಸಂಗ್ರಹಿಸಲಾಗಿದೆ. ಅಗತ್ಯವಿದ್ದಲ್ಲಿ ಅಗತ್ಯ ಸಾಮಗ್ರಿಯನ್ನು ಬಾಡಿಗೆ ಪಡೆಯಲು, ಬೇರೆ ಇಲಾಖೆಯ ಸಂಪನ್ಮೂಲಗಳನ್ನು ಪಡೆಯುವ ಅಧಿಕಾರವನ್ನು ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ರಕ್ಷಣಾ ಕಾರ್ಯಾಚರಣೆಗಾಗಿ ಎಸ್‍.ಡಿ.ಆರ್.ಎಫ್, ನೌಕಾನೆಲೆ, ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲಾಗವುದು. ಸ್ಥಳೀಯವಾಗಿ ಕೂಡ ರಕ್ಷಣಾ ತಂಡಗಳನ್ನು ರಚಿಸಲಾಗಿದೆ. ವಿದ್ಯುತ್ ಅವಘಡವಾದಾಗ ತಕ್ಷಣ ಸ್ಪಂದಿಸಲು ಹೆಸ್ಕಾಂನಿಂದ ಸಹಾಯವಾಣಿ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ನಿಯಂತ್ರಣ ಕೊಠಡಿ ಆರಂಭ:ಪ್ರವಾಹದ ಸಂದರ್ಭದಲ್ಲಿ ಜನ ಸಂಪರ್ಕಕ್ಕೆ ಅನುಕೂಲವಾಗುವಂತೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಪೊಲೀಸ್ ವೈರ್‌ಲೆಸ್ ಮುಖಾಂತರ ಕೂಡ ಸಂಪರ್ಕಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಯಾನಿಟೈಸ್, ಕ್ಲೋರಿನೇಷನ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹೂಳು: ತಜ್ಞರಿಂದ ಸಮೀಕ್ಷೆ: ಕದ್ರಾ ಕೆ.ಪಿ.ಸಿ.ಎಲ್ ಕಾರ್ಯಪಾಲಕ ಎಂಜಿನಿಯರ್ (ಸಿವಿಲ್) ಎಸ್.ಓಂಪ್ರಕಾಶ ಮಾತನಾಡಿ, ‘ಜಲಾಶಯದಲ್ಲಿ ನೀರು ಸಂಗ್ರಹಣೆಯ ಸಾಮರ್ಥ್ಯದ ಬಗ್ಗೆ ಕೇಂದ್ರೀಯ ಜಲ ಮಂಡಳಿಯ ತಜ್ಞರು ಸಮೀಕ್ಷೆ ಮಾಡಿದ್ದಾರೆ. ಈ ವರ್ಷ ಆಗಸ್ಟ್ ಒಳಗೆ ವರದಿ ಸಲ್ಲಿಸಲಿದ್ದಾರೆ. ಆಗ ಜಲಾಶಯದಲ್ಲಿರುವ ಹೂಳಿನ ಪ್ರಮಾಣ ತಿಳಿಯಲಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದ್ರಿನಾಥ್ ಇದ್ದರು.

–––––

* ಪ್ರಾಕೃತಿಕ ವಿಕೋಪ ಎದುರಿಸಲು ತಂತ್ರಜ್ಞಾನ ಬಳಸಲಾಗುತ್ತಿದೆ, ಹಾನಿಯ ವರದಿ ಸಂಗ್ರಹಿಸಲು ಜಿ.ಪಿ.ಎಸ್ ವ್ಯವಸ್ಥೆ ಮಾಡಲಾಗಿದೆ. ಹಾನಿ ಪರಿಶೀಲನೆಗೆ ಜಂಟಿ ಸಮೀಕ್ಷಾ ತಂಡ ರಚಿಸಲಾಗಿದೆ.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.