ADVERTISEMENT

ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಜಿಲ್ಲಾಡಳಿತ

ಮುಡಗೇರಿಯ ಉಗ್ರಾಣದಲ್ಲಿ ಇ.ವಿ.ಎಂ. ಯಂತ್ರಗಳ ತಪಾಸಣೆ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 16:38 IST
Last Updated 24 ಜನವರಿ 2023, 16:38 IST
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಂಕೋಲಾ ತಾಲ್ಲೂಕಿನ ವರ್ಲಿಬೇಣದಲ್ಲಿ ಮತಗಟ್ಟೆ ತೆರೆಯಲಿರುವ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಂಕೋಲಾ ತಾಲ್ಲೂಕಿನ ವರ್ಲಿಬೇಣದಲ್ಲಿ ಮತಗಟ್ಟೆ ತೆರೆಯಲಿರುವ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು   

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದೆ. ಈಗಾಗಲೆ ಇ.ವಿ.ಎಂ. ಯಂತ್ರಗಳ ಮೊದಲ ಹಂತದ ತಪಾಸಣೆ ಕಾರ್ಯ ಪೂರ್ಣಗೊಂಡಿದೆ.

ತಿಂಗಳ ಹಿಂದೆ ಜಿಲ್ಲೆಗೆ ಪೂರೈಕೆಯಾಗಿದ್ದ ಇ.ವಿ.ಎಂ. ಯಂತ್ರಗಳನ್ನು ತಾಲ್ಲೂಕಿನ ಮುಡಗೇರಿಯಲ್ಲಿರುವ ಉಗ್ರಾಣದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿದೆ. ಜ.12ರಿಂದ 21ರವರೆಗೆ ಹೈದರಾಬಾದ್‍ನ ಇ.ಸಿ.ಐ.ಎಲ್. ಸಂಸ್ಥೆಯ 18 ಎಂಜಿನಿಯರ್‌ಗಳ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಇ.ವಿ.ಎಂ.ಗಳ ಸುಸ್ಥಿತಿಯ ಕುರಿತು ಮೊದಲ ಹಂತದ ತಪಾಸಣೆ ನಡೆದಿದೆ. 1,883 ಕಂಟ್ರೋಲ್ ಯುನಿಟ್, 2,685 ಬ್ಯಾಲೆಟ್ ಯುನಿಟ್, 2,039 ವಿ.ವಿ.ಪ್ಯಾಟ್‍ಗಳನ್ನು ಸಜ್ಜುಗೊಳಿಸಲಾಗಿದೆ.

ಆರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಜಿಲ್ಲೆಯಲ್ಲಿ 11,76,286 ಮತದಾರರಿದ್ದಾರೆ. 1,435 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಜ.5ರಂದು ಮತದಾರರ ಅಂತಿಮ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಹಂತ ಹಂತವಾಗಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ADVERTISEMENT

ಸುಮಾರು ಹದಿನೈದು ದಿನಗಳಿಂದ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗಳೊಂದಿಗೆ ನಿರಂತರ ಸಭೆ ನಡೆಸಿ, ಚುನಾವಣೆಗೆ ಪೂರ್ವಸಿದ್ಧತೆ ಕೈಗೊಂಡಿದ್ದಾರೆ. ಪ್ರತಿ ಮತಗಟ್ಟೆಗಳಿಗೆ ಖುದ್ದು ತೆರಳಿ, ವ್ಯವಸ್ಥೆ ಪರಿಶೀಲಿಸಲು ಉಪವಿಭಾಗಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದಾರೆ.

ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಸಂಬಂಧ ವಿವಿಧ ಇಲಾಖೆಗಳ 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಈ ಪೈಕಿ ನೋಡಲ್ ಅಧಿಕಾರಿಗಳು, ಉಸ್ತುವಾರಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಾರ್ಯ ಚಾಲ್ತಿಯಲ್ಲಿದೆ.

‘ಚುನಾವಣಾ ಆಯೋಗದ ಮಾರ್ಗದರ್ಶನದ ಪ್ರಕಾರ ಪ್ರತಿ ಹಂತದ ಸಿದ್ಧತೆ ಕೈಗೊಳ್ಳಬೇಕಾಗುತ್ತದೆ. ಇ.ವಿ.ಎಂಗಳ ತಪಾಸಣಾ ಕಾರ್ಯ ಮೊದಲ ಹಂತದಲ್ಲಿ ಮುಕ್ತಾಯವಾಗಿದೆ. ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವ ಕೆಲಸ ನಡೆಯಲಿದೆ. ಆ ಬಳಿಕ ಕ್ಷೇತ್ರವಾರು ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಸಿಬ್ಬಂದಿಗೆ ತರಬೇತಿ ನಡೆಯಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದರು.

------------------

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳಲಿರುವ ಸಿಬ್ಬಂದಿ ಮಾಹಿತಿಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು ಇನ್ನಷ್ಟೆ ನೀಡಬೇಕಿದೆ.

ರಾಜು ಮೊಗವೀರ

ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.