ಶಿರಸಿ: ದೀಪಾವಳಿಯು ಇತರೆಡೆ ದೀಪಗಳ ಹಬ್ಬವಾದರೆ ಮಲೆನಾಡಿನಲ್ಲಿ ಮಾತ್ರ ಕೃಷಿ ಬದುಕಿನ ವಿವಿಧ ಮಜಲುಗಳನ್ನು ಅನಾವರಣ ಮಾಡುವ ವಿಶೇಷ ಹಬ್ಬವಾಗಿದೆ. ಇದು ಕೃಷಿಕರ ಪಾಲಿನ ದೊಡ್ಡಹಬ್ಬವಾಗಿ ಗಮನ ಸೆಳೆಯುತ್ತದೆ.
ಮಲೆನಾಡಿನ ಹಲವೆಡೆ ದೀಪಾವಳಿ ಹಬ್ಬದಲ್ಲಿ ಗೋವುಗಳ ಪೂಜೆಗೆ ನೀಡಿದಷ್ಟೇ ಆದ್ಯತೆಯನ್ನು ಹುಲಿ ದೇವರಿಗೂ ನೀಡಲಾಗುತ್ತದೆ. ಕೃಷಿ ಬದುಕಿಗೆ ಜೀವಾಳವಾಗಿರುವ ಜಾನುವಾರುಗಳಿಗೆ ಅಪಾಯ ಮಾಡಬೇಡ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗುತ್ತದೆ. ಶಿರಸಿ ಸೀಮೆ ಸೇರಿದಂತೆ ಮಲೆನಾಡಿನಲ್ಲಿ ಹುಲಿ ಕಾಟ ಹಿಂದೆ ಹೆಚ್ಚಿದ್ದ ಕಾಲದಲ್ಲಿ ಹುಲಿಯಿಂದ ಜನ ಜಾನುವಾರುಗಳ ರಕ್ಷಣೆ ಪಡೆದುಕೊಳ್ಳಲು ಪೂಜಾ ಪದ್ಧತಿ ನಡೆದಿದೆ ಎಂಬುದು ಪ್ರತೀತಿ.
ಹುಲಿಯಪ್ಪನ ಮೂರ್ತಿ ಅನೇಕ ಹುಲಿ ಬನಗಳಲ್ಲಿ ಇದೆ. ಗ್ರಾಮಗಳ ಹೊರಗಡೆ ಅರಣ್ಯ ಪ್ರದೇಶದಲ್ಲಿಯೂ ಹುಲಿಯಪ್ಪನ ಮೂರ್ತಿ ನೋಡಬಹುದಾಗಿದೆ. ದೀಪಾವಳಿಗೆ ಗ್ರಾಮಸ್ಥರು ಎಲ್ಲ ಸೇರಿ ಇಲ್ಲಿ ಪೂಜಿಸುವ ಪದ್ಧತಿ ಇದೆ. ಅಲ್ಲದೆ ಕಾಡಿನೆಡೆಗೆ ತೆರಳಿದ ಗೋವುಗಳು ಹಿಂದಿರುಗದೇ ಇದ್ದಾಗ ಹರಕೆ ಹೊತ್ತುಕೊಂಡು ದೀಪಾವಳಿ ವೇಳೆ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ.
ಮನೆಯಲ್ಲಿ ಎಷ್ಟು ದನ, ಕರುಗಳಿರುತ್ತವೆಯೋ ಅಷ್ಟು ತೆಂಗಿನ ಕಾಯಿಯನ್ನು ಹುಲಿ ದೇವರಿಗೆ ಒಡೆಯಲಾಗುತ್ತದೆ. ಊರಿನ ಜನರೆಲ್ಲಾ ಒಂದೆಡೆ ಸೇರಿ ಒಡೆಸಿದ ಕಾಯಿ ರಾಶಿಯನ್ನು ಮನೆಗೆ ತಂದು ಹೋಳಿಗೆ ಮಾಡಿ ಸವಿಯಲಾಗುತ್ತದೆ.
ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಆಚರಣೆಯ ಅಂತಿಮ ದಿನ ರೈತರು ನಡೆಸುವ ದೀಪದ ಕೋಲು ಸಂಪ್ರದಾಯ ವಿಭಿನ್ನವಾಗಿ ಗಮನ ಸೆಳೆಯುತ್ತದೆ. ರೈತರು ತಮ್ಮ ಕೃಷಿ ಜಮೀನುಗಳಿಗೆ ದೀಪದ ಕೋಲನ್ನು ಹಚ್ಚುವ ಮೂಲಕ ಇದನ್ನು ಆಚರಣೆ ಮಾಡುತ್ತಾರೆ. ದೂಪದ ಮರದಿಂದ ಸಿಕ್ಕ ದ್ರವವನ್ನು ತೆಗೆದುಕೊಂಡು ಪುಡಿ ಮಾಡಿ ಅದನ್ನು ಬೇಯಿಸಿಕೊಂಡು ಅದನ್ನ ಒಂದು ಕೋಲಿಗೆ ಸುತ್ತಿ ಹಾಡನ್ನು ಹೇಳುವ ಮೂಲಕ ಈ ದೀಪದ ಕೋಲು ಪೂಜೆಯನ್ನು ಆಚರಣೆ ಮಾಡುತ್ತಾರೆ. ಸಾಮಾನ್ಯವಾಗಿ ರೈತರು ತಮಗೆ ಅನ್ನ ನೀಡುವ ಭೂಮಿಯನ್ನು ಹೆತ್ತ ತಾಯಿಯಂತೆ ನೋಡಿ ಕೊಳ್ಳುತ್ತಾರೆ. ಹಾಗಾಗಿ ವರ್ಷಕ್ಕೆ ಒಂದು ಬಾರಿ ಆದರೂ ತಮ್ಮ ಭೂಮಿಗೆ ದೀಪ ಹಚ್ಚುವ ಮೂಲಕ ಭೂತಾಯಿಗೆ ನಮಿಸುತ್ತಾರೆ. ಈ ದೀಪದ ಕೋಲನ್ನು ಹಚ್ಚುವುದರಿಂದ ಕೆಟ್ಟ ಗುಣ ನಮ್ಮ ಮನೆ, ಹೊಲ, ಗದ್ದೆಯನ್ನು ಬಿಟ್ಟು ಹೋಗುತ್ತದೆ ಅನ್ನುವ ನಂಬಿಕೆಯೂ ಇದೆ.
ಶಿರಸಿ ತಾಲ್ಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರೇಗಾರ ಗ್ರಾಮದಲ್ಲಿ ದೀಪಾವಳಿಯ ವೇಳೆ ಗೋಪೂಜೆ ಆಚರಣೆಯನ್ನೇ ಮಾಡಲಾಗುವುದಿಲ್ಲ. ಗ್ರಾಮದ ಪ್ರಮುಖರು ಹೇಳುವಂತೆ ಗ್ರಾಮದ ಇತಿಹಾಸದಲ್ಲಿ ಮೇಯಲು ಬಿಟ್ಟ ಆಕಳನ್ನು ಹುಲಿ ಹಿಡಿದ ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣದಿಂದ ವಾಪಸಾಗಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ದೀಪಾವಳಿ ದಿನಗಳಲ್ಲಿ ಗೋಪೂಜೆ ಆಚರಣೆಯನ್ನೇ ಬಿಟ್ಟಿರಬಹುದು ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.