ಕಾರವಾರ: ಸಮೀಪದ ದೇವಬಾಗ ಕಡಲತೀರದಿಂದ ಬುಧವಾರ ಸಮುದ್ರ ಯಾನ ಮಾಡಿದ ಪ್ರವಾಸಿಗರಿಗೆ ಅಚ್ಚರಿ ಕಾದಿತ್ತು. ಡಾಲ್ಫಿನ್‌ಗಳ ಹಿಂಡು ನೀರಿನಿಂದ ಮೇಲೆ ಜಿಗಿಯುತ್ತ ಚಿನ್ನಾಟವಾಡುತ್ತಿದ್ದ ದೃಶ್ಯಗಳನ್ನು ಕಂಡು ಪುಳಕಿತಗೊಂಡರು.
ಕಾರವಾರ ಸುತ್ತಮುತ್ತ ಸಮುದ್ರದಲ್ಲಿ ಡಾಲ್ಫಿನ್‌ಗಳು ಸಾಮಾನ್ಯವಾಗಿ ವಾಸಿಸುತ್ತವೆ. ಆದರೆ, ದೋಣಿಗಳ ಸಂಚಾರವೂ ಸೇರಿದಂತೆ ವಿವಿಧ ಚಟುವಟಿಕೆಗಳ ಕಾರಣದಿಂದ ಅವು ಕಾಣಿಸುವುದು ವಿರಳವಾಗಿದೆ. ಸಮುದ್ರದಲ್ಲಿರುವ ಕೂರ್ಮಗಡ, ದೇವಗಡ ಮತ್ತು ಮಧ್ಯಗಡ ದ್ವೀಪಗಳ ಸಮೀಪ ಮಾನವ ಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸಂಚರಿಸುತ್ತವೆ.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್‌ನಿಂದ ಪ್ರವಾಸಿಗರನ್ನು ಡಾಲ್ಫಿನ್ ವೀಕ್ಷಣೆಗೆಂದು ಕರೆದುಕೊಂಡು ಹೋಗಲಾಗುತ್ತದೆ. ಹಾಗೆ ಹೋಗಿದ್ದ ತಂಡವೊಂದಕ್ಕೆ ಬುಧವಾರ ಡಾಲ್ಫಿನ್‌ಗಳು ನಿರಾಸೆ ಮಾಡಲಿಲ್ಲ. 10-15 ಡಾಲ್ಫಿನ್‌ಗಳು ಹಿಂಡಾಗಿ ಸಂಚರಿಸುತ್ತಿದ್ದರೆ, ಕೆಲವು ನೀರಿನಿಂದ ಮೇಲೆ ಜಿಗಿದು ತಮ್ಮ ಇರುವಿಕೆಯನ್ನು ತೋರಿಸಿದವು.
ಈ ಭಾಗದಲ್ಲಿ ಆಗಾಗ ಡಾಲ್ಫಿನ್‌ಗಳ ಕಳೇಬರಗಳು ದಡಕ್ಕೆ ಬಂದು ಬೀಳುತ್ತಿರುತ್ತವೆ. ಅವುಗಳ ಸಂತತಿಯ ಸಂರಕ್ಷಣೆ ಸಲುವಾಗಿ ಕೇಂದ್ರ ಸರ್ಕಾರದ 'ಡಾಲ್ಫಿನ್ ಯೋಜನೆ'ಯಡಿ ಕಾರ್ಯಕ್ರಮ ಜಾರಿಗೆ ಅರಣ್ಯ ಇಲಾಖೆಯಿಂದ ಈಗಾಗಲೇ ಪ್ರಸ್ತಾವ ಸಲ್ಲಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.