ದಾಂಡೇಲಿ: ‘ದೇವನಹಳ್ಳಿ ರೈತರ ಹಕ್ಕೊತ್ತಾಯ ಈಡೇರಿಸಬೇಕು. ಭೂ ಹೋರಾಟಗಾರರ ಮೇಲೆ ಅಮಾನವೀಯ ದೌರ್ಜನ್ಯ ಎಸಗಿ ಹೋರಾಟ ಹತ್ತಿಕ್ಕಿದ ಪೋಲಿಸರ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಡಿವೈಎಫ್ಐ ಹಾಗೂ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
‘ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಚನ್ನರಾಯಪಟ್ಟಣ ಹೋಬಳಿಯಲ್ಲಿ ತಮ್ಮ ಭೂಮಿ ಉಳಿಸಿಕೊಳ್ಳಲು 18 ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದ 13 ಹಳ್ಳಿಗಳ ರೈತರನ್ನು ಬಂಧಿಸಿದ ಸರ್ಕಾರದ ಕ್ರಮ ಖಂಡಿಸುತ್ತೇವೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
‘ಫಲವತ್ತಾದ ಭೂಮಿಯಲ್ಲಿ ಬದುಕು ಕಟ್ಟಿಕೊಂಡ ರೈತರ ತಂಟೆಗೆ ಬರಬೇಡಿ, ರೈತರ ಭೂಮಿ ರೈತರದ್ದೇ ಆಗಿ ಉಳಿಸಬೇಕು, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಈ ರೈತರ ಭೂಮಿಯನ್ನು ಸರ್ಕಾರದ ಯಾವುದೇ ಯೋಜನೆಗೆ ನೀಡಬಾರದು. ಬಂಧಿತ ಹೋರಾಟಗಾರರ ಮೇಲೆ ಪ್ರಕರಣ ಹಾಕಬಾರದು. ಹೋರಾಟವನ್ನು ಮುರಿಯುವ ಅಸಾಂವಿಧಾನಿಕ ಕೆಲಸ ಮಾಡಬಾರದು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾ ಸಮಿತಿ ಸದಸ್ಯರಾದ ಡಿ. ಸ್ಯಾಮ್‌ಸನ್, ಇಮ್ರಾನ್ ಖಾನ್, ಸಲೀಂ ಸಯ್ಯದ್, ರತ್ನದೀಪಾ ಎನ್.ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.