ADVERTISEMENT

ಅಭ್ಯರ್ಥಿಗಳ ‘ಬಹಿರಂಗ’ ಕಸರತ್ತು ಅಂತ್ಯ; ಮತದಾನಕ್ಕೆ ಉತ್ತರ ಕನ್ನಡ ಕ್ಷೇತ್ರ ಸಜ್ಜು

ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 16:48 IST
Last Updated 30 ಏಪ್ರಿಲ್ 2019, 16:48 IST
ಕಾರವಾರದಲ್ಲಿ ಭಾನುವಾರ ಮೆರವಣಿಗೆ ನಡೆಸಿದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್
ಕಾರವಾರದಲ್ಲಿ ಭಾನುವಾರ ಮೆರವಣಿಗೆ ನಡೆಸಿದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್   

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇದೇ 23ರಂದು ಮತದಾನ ನಡೆಯಲಿದ್ದು, ರೋಡ್ ಶೋ, ಸಾರ್ವಜನಿಕ ಸಭೆ, ಸಮಾವೇಶ ಸೇರಿದಂತೆ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ 6 ಗಂಟೆಯಿಂದಲೇ ತೆರೆ ಬಿದ್ದಿದೆ. ಅಭ್ಯರ್ಥಿಗಳಿಗೆ ತಮ್ಮ ಪರ ಪ್ರಚಾರಕ್ಕೆ ಕೇವಲ ಒಂದು ದಿನ ಉಳಿದಿದ್ದು, ಸೋಮವಾರ ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಹೊರತುಪಡಿಸಿ, ಒಂದು ಪ್ರಾದೇಶಿಕ ಪಕ್ಷದ ಅಭ್ಯರ್ಥಿ ಹಾಗೂ 10 ಮಂದಿ ಪಕ್ಷೇತರರು ಇದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಎಲ್ಲಿಯೂ ಪಕ್ಷೇತರರ ಪ್ರಚಾರ ಅಷ್ಟಾಗಿ ಜನರಿಗೆ ತಲುಪಿಲ್ಲ. ಹೀಗಾಗಿ, ಈ ಚುನಾವಣೆಯಲ್ಲಿ ಅವರು ಪರಿಣಾಮ ಬೀರುವುದಿಲ್ಲ ಎನ್ನುವುದು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ಕ್ಷೇತ್ರದ ಮಟ್ಟಿಗೆ ಜೆಡಿಎಸ್– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಮಧ್ಯೆಯೇ ನೇರ ಪೈಪೋಟಿ ನಡೆಯುತ್ತಿದೆ.ಹಾಲಿ ಸಂಸದ ಅನಂತಕುಮಾರ ಹೆಗಡೆ ಏಳನೇ ಬಾರಿಗೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದರೆ, ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುವ ತವಕದಲ್ಲಿ ಆನಂದ ಅಸ್ನೋಟಿಕರ್ ಇದ್ದಾರೆ. ಈ ಬಾರಿಯೂ ಮೋದಿ ಹೆಸರಿನಲ್ಲಿ ಪ್ರಚಾರಕ್ಕೆ ಇಳಿದಿರುವ ಬಿಜೆಪಿ, ಹಿಂದುತ್ವದ ಮೂಲಕವೂ ಕ್ಷೇತ್ರವನ್ನು ವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ADVERTISEMENT

ಇತ್ತ ಮೈತ್ರಿಕೂಟ, ಹಿಂದುಳಿದವರ ಅಭಿವೃದ್ಧಿಯ ಹೆಸರಿನಲ್ಲಿ, ನಿರುದ್ಯೋಗ, ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಲಿ ಸಂಸದರ ವೈಫಲ್ಯಗಳನ್ನು ಹಾಗೂ ಸಮಸ್ಯೆಗಳನ್ನು ಜನರನ್ನು ಮುಂದಿಡುತ್ತ ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಿದೆ. ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ಮೊದಮೊದಲು ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಉಂಟಾಗಿತ್ತು. ಶಿರಸಿಯ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯ ಬಳಿ ಕುರ್ಚಿಗಳನ್ನು ಒಡೆದು, ಟೈರ್‌ಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾರವಾರ– ಅಂಕೋಲಾ ಕ್ಷೇತ್ರದಲ್ಲೂ ಮುಖಂಡ ಸತೀಶ್ ಸೈಲ್, ಜೆಡಿಎಸ್‌ ಜತೆಗೂಡಿ ಪ್ರಚಾರಕ್ಕೆ ತೆರಳಲು ನಿರಾಕರಿಸಿ ಬಹಿರಂಗವಾಗಿ ಘೋಷಿಸಿದ್ದರು. ಆದರೆ, ಕೊನೆಕೊನೆಗೆ ಎರಡೂ ಪಕ್ಷಗಳಲ್ಲಿ ಹೊಂದಾಣಿಕೆ ಕಂಡು ಬಂದಿತ್ತು.

ತಾರಾ ಪ್ರಚಾರಕರು:

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ– ಬಿಜೆಪಿಯ ಪರವಾಗಿ ಕೆಲವೇ ಕೆಲವು ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನಟಿ ಮಾಳವಿಕಾ ಅವಿನಾಶ್, ತಾರಾ ಅನೂರಾಧಾ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಬಹಿರಂಗ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಹಲವೆಡೆ ಸುತ್ತಾಡಿ ಮತಯಾಚನೆ ಮಾಡಿದ್ದಾರೆ.

ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ವರಿಷ್ಠಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ, ಎಐಸಿಸಿ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ಪರವಾಗಿಸಂಸ್ಥಾಪಕ ಅಧ್ಯಕ್ಷ ಉಪೇಂದ್ರ ಒಂದು ದಿನದ ಪ್ರಚಾರ ಕೈಗೊಂಡಿದ್ದಾರೆ.

ಪ್ರಚಾರ ಅಂತ್ಯ:

ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಕೊನೆಯ ಅವಧಿಯ ಪ್ರಚಾರ ಬಿರುಸಿನಿಂದ ಸಾಗಿದ‌್ದು, ಬಿಜೆಪಿಯ ಅಭ್ಯರ್ಥಿಯ ಕಡೆಯಿಂದ ಮೊಬೈಲ್ ಸಂದೇಶ ಹಾಗೂ ಮೈತ್ರಿಕೂಟದ ಅಭ್ಯರ್ಥಿಯ ಕಡೆಯಿಂದ ಧ್ವನಿ ಮುದ್ರಿತ ಕರೆಗಳು ಬರುತ್ತಿವೆ.

ಪ್ರಚಾರ: ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ನಗರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮೆರವಣಿಗೆ ನಡೆಸಿದರೆ, ಬಿಜೆಪಿಯ ಅಭ್ಯರ್ಥಿಯ ಪರಸ್ಥಳೀಯರ ಮುಖಂಡರುಬಹಿರಂಗ ಪ್ರಚಾರ ನಡೆಸಿದರು.

ನಗರದ ಮಾಲಾದೇವಿ ಮೈದಾನದಿಂದ ಸುಭಾಷ್ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿಆನಂದ ಅಸ್ನೋಟಿಕರ್, ಬಿಜೆಪಿ ಹಾಗೂ ಕ್ಷೇತ್ರದ ಅಭ್ಯರ್ಥಿಯ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿತೆಕ್ಕೆಗೆ ಸಿದ್ದಾರ್ಥ: ಬಿಜೆಪಿಯ ಬಹಿರಂಗ ಪ್ರಚಾರದ ಕೊನೆಯಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್‌ಯುಐ) ರಾಜ್ಯ ಕಾರ್ಯದರ್ಶಿ ಸಿದ್ದಾರ್ಥ ನಾಯಕ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ನಗರಸಭೆಯ ಪಕ್ಷೇತರ ಸದಸ್ಯೆ ಸುಜಾತಾ ಥಾಮ್ಸೆ ಕೂಡ ಬಿಜೆಪಿ ಸೇರಿಕೊಂಡರು.

ಇದಕ್ಕೂ ಮುನ್ನ ಬಿಜೆಪಿಯ ಮಹಿಳಾ ಮುಖಂಡರಾದ ಶಾರದಾ ನಾಯಕ ಸೇರಿದಂತೆ ಸ್ಥಳೀಯ ಪ್ರಮುಖರು, ಸಂತೆ ಮಾರುಕಟ್ಟೆಗಳಿಗೆ ತೆರಳಿ ಪ್ರಚಾರ ನಡೆಸಿದರು. ಅಂಗಡಿ– ಮುಂಗಟ್ಟುಗಳಲ್ಲಿ ಕರಪತ್ರ ವಿತರಿಸಿದರು.

ಉತ್ತರ ಕನ್ನಡ ಕ್ಷೇತ್ರದ ಮತದಾರರು

ವಿಧಾನಸಭಾ ಕ್ಷೇತ್ರ; ಪುರುಷರು; ಮಹಿಳೆಯರು; ಒಟ್ಟು

ಭಟ್ಕಳ;1,09,743;1,05,704;2,15,447

ಕುಮಟಾ;91,604;90,689;1,82,295

ಕಾರವಾರ;1,08,519;1,10,039;2,18,558

ಹಳಿಯಾಳ;87,667;85,479;1,73,149

ಶಿರಸಿ;97,691;95,395;1,93,087

ಯಲ್ಲಾಪುರ;87,944;84,690;1,72,635

ಕಿತ್ತೂರು;96,028;93,689;1,89,719

––––––––––––––––––––––––––––

ಒಟ್ಟು; 5,83,168; 5,71,996; 11,55,171

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.