ಕಾರವಾರ: ಇಲ್ಲಿನ ಮಾರುಕಟ್ಟೆಯಲ್ಲಿ ಭಾನುವಾರ ಬೇಸಿಗೆ ಕಾಲದ ಕೊನೆಯ ವಾರದ ಸಂತೆ ನಡೆಯಿತು. ಮಳೆಗಾಲಕ್ಕೆ ದಾಸ್ತಾನಿಟ್ಟುಕೊಳ್ಳಲು ಒಣಮೀನುಗಳ ಖರೀದಿ ಭರಾಟೆ ಜೋರಾಗಿತ್ತು.
ಪ್ರತಿ ಬಾರಿಯೂ ಮೇ ಅಂತ್ಯದ ವಾರದ ಸಂತೆಯಲ್ಲಿ ಒಣಮೀನುಗಳ ಮಾರಾಟ ಬಿರುಸುಗೊಳ್ಳುತ್ತದೆ. ಕಳೆದ ವಾರ ವಿಪರೀತ ಮಳೆ ಸುರಿದಿದ್ದರಿಂದ ಒಣಮೀನುಗಳ ಖರೀದಿಗೆ ಗ್ರಾಹಕರ ಕೊರತೆ ಕಾಡಿತ್ತು. ಈ ವಾರಿ ಖರೀದಿಗೆ ಜನರು ಮುಗಿಬಿದ್ದಿದ್ದು ಕಂಡುಬಂತು.
ಇಲ್ಲಿನ ಶಿವಾಜಿ ವೃತ್ತ, ಕೋರ್ಟ್ ರಸ್ತೆಯಲ್ಲಿ ಸಾಲಾಗಿ ಕುಳಿತು ಒಣಮೀನು ಮಾರಾಟ ಮಾಡುವ ವ್ಯಾಪಾರಿಗಳು ಉತ್ತಮ ವಹಿವಾಟು ನಡೆಸಿದರು. ಸ್ಥಳೀಯರು ಮಾತ್ರವಲ್ಲದೆ, ನೆರೆಯ ಗೋವಾ, ಅಂಕೋಲಾ ಭಾಗದಿಂದಲೂ ಗ್ರಾಹಕರು ಖರೀದಿಗೆ ಬಂದಿದ್ದರು. ತಿಂಗಳುಗಳ ಕಾಲ ಒಣಗಿಸಿ, ಸಂಗ್ರಹಿಸಿಟ್ಟ ಬಗೆಬಗೆಯ ಒಣಮೀನುಗಳನ್ನು ವ್ಯಾಪಾರಿಗಳು ಮಾರಾಟ ಮಾಡಿದರು.
ದೊಡ್ಡ ಗಾತ್ರದ ಮೋರಿ ಮೀನು ಜೋಡಿಗೆ ₹1,800 ರಿಂದ ₹2,500 ದರಕ್ಕೆ ಮಾರಾಟವಾಗಿದ್ದವು. ದೊಡ್ಡ ಗಾತ್ರದ ಪ್ರತಿ 10 ಮೀನಿಗೆ ₹200, ಸಣ್ಣ ಗಾತ್ರದ ಬಂಗುಡೆಗೆ ₹100, ಬೊಂಬಿಲ್ ಮೀನಿಗೆ ಪ್ರತಿ ಒಂದು ಕಟ್ಟು ₹150, ಸಣ್ಣ ಗಾತ್ರದ ಸಿಗಡಿ ಮೀನುಗಳು ₹100ಕ್ಕೆ ಮೂರು ಸೇರು ದರದಲ್ಲಿ ಮಾರಾಟ ಕಂಡವು.
‘ಮೇ ತಿಂಗಳ ಕೊನೆಯ ಮೂರು ಸಂತೆಯಲ್ಲಿ ಒಣಮೀನುಗಳಿಗೆ ಬೇಡಿಕೆ ಹೆಚ್ಚು. ಈ ಬಾರಿ ಅನಿರೀಕ್ಷಿತ ಮಳೆಯಿಂದ ವಹಿವಾಟಿಗೆ ತೊಂದರೆಯಾಗಿದೆ. ಹೊರರಾಜ್ಯದಲ್ಲಿ ನೆಲೆಸಿದ ಸ್ಥಳೀಯ ಜನರು ಎರಡು ವಾರ ಮುಂಚಿತವಾಗಿಯೇ ಖರೀದಿ ಮುಗಿಸಿದ್ದಾರೆ. ಈ ಬಾರಿ ಸಂತೆಯಲ್ಲಿ ಸ್ಥಳೀಯ ಗ್ರಾಹಕರಿಂದ ಬೇಡಿಕೆ ಹೆಚ್ಚಿತ್ತು’ ಎಂದು ಮೀನು ವ್ಯಾಪಾರಿ ಜ್ಯೋತಿ ಗಂಗಾವಳಿಕರ್ ಹೇಳಿದರು.
‘ಕಾರವಾರದಲ್ಲಿ ಒಣಮೀನು ಸಂಸ್ಕರಣೆ ಅಚ್ಚುಕಟ್ಟಾಗಿ ನಡೆಯುತ್ತದೆ. ಹದವಾಗಿ ಉಪ್ಪು ಬೆರೆಸಿ, ಹದ ಬಿಸಿಲಿನಲ್ಲಿ ಒಣಗಿಸುವ ಕಾರಣದಿಂದ ರುಚಿ ಹೆಚ್ಚು. ಹೀಗಾಗಿ ಅಕ್ಕಪಕ್ಕದ ತಾಲ್ಲೂಕುಗಳಿಂದ, ದಕ್ಷಿಣ ಗೋವಾ ಭಾಗದ ಜನರಿಂದಲೂ ಹೆಚ್ಚು ಬೇಡಿಕೆ ಇದೆ’ ಎಂದೂ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.