ADVERTISEMENT

ಕಾರವಾರ: ತಲೆನೋವಾದ ತ್ಯಾಜ್ಯ ವಿಲೇವಾರಿ ಘಟಕ

ವಲಸೆ ಕಾರ್ಮಿಕರೇ ತುಂಬಿರುವ ಶಿರವಾಡ ಗ್ರಾ.ಪಂ.: ಮೂಲಸೌಕರ್ಯಕ್ಕೂ ತೊಂದರೆ

ಗಣಪತಿ ಹೆಗಡೆ
Published 24 ಜನವರಿ 2023, 19:30 IST
Last Updated 24 ಜನವರಿ 2023, 19:30 IST
ಶಿರವಾಡ ಗ್ರಾಮದಲ್ಲಿರುವ ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ
ಶಿರವಾಡ ಗ್ರಾಮದಲ್ಲಿರುವ ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ   

ಕಾರವಾರ: ‘ಕೂಗಳತೆ ದೂರದ ತ್ಯಾಜ್ಯ ವಿಲೇವಾರಿ ಘಟಕದಿಂದ ಬರುವ ದುರ್ವಾಸನೆಯಿಂದ ಊಟ, ತಿಂಡಿ ಸೇವಿಸಲೂ ಆಗದ ಸ್ಥಿತಿ ಇದೆ. ಇದೇನೂ ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಹಲವು ದಶಕಗಳಿಂದ ಈ ತಲೆನೋವು ನಮಗೆ ಅಂಟಿಕೊಂಡೇ ಇದೆ’.

ಹೀಗೆ ಶಿರವಾಡ ಗ್ರಾಮದಲ್ಲಿರುವ ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಿದ್ದು ಗ್ರಾಮದ ಮಂಜುಳಾ ಶಿರವಾಡಕರ್. ‘ನಾಲ್ಕು ದಶಕಗಳ ಹಿಂದೆ ಖಾಲಿ ಜಾಗದಲ್ಲಿ ಕಸ ಸಂಗ್ರಹ ಆರಂಭಿಸಿದ್ದರು. ಈಗ ವಿಶಾಲವಾದ ಜಾಗದಲ್ಲಿ ದೊಡ್ಡ ಘಟಕವೇ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಂಗ್ರಹವಾದ ತ್ಯಾಜ್ಯಗಳಿಂದ ಹೊರಬರುವ ವಾಸನೆ ಊರಿನವರ ನೆಮ್ಮದಿ ಕೆಡಿಸಿದೆ’ ಎಂದು ಸಮಸ್ಯೆ ಬಿಚ್ಚಿಟ್ಟರು.

‘ವಿಲೇವಾರಿ ಘಟಕದಲ್ಲಿ ದಾಸ್ತಾನು ಮಾಡಿದ ಸತ್ತ ಪ್ರಾಣಿಗಳ ಕಳೇಬರ, ಮಾಂಸ ತ್ಯಾಜ್ಯಗಳನ್ನು ಕಾಗೆ, ಹದ್ದುಗಳು ಹೊರಗೆ ಹೊತ್ತೊಯ್ಯುತ್ತವೆ. ಸುತ್ತಲ ಪ್ರದೇಶಗಳ ಮನೆಗಳ ಮೇಲೆ, ಬಾವಿಯೊಳಗೆ ಕಳೇಬರದ ತುಂಡು ಬಿದ್ದು ನೀರು ಮಲೀನಗೊಂಡಿರುವ ಉದಾಹರಣೆ ಸಾಕಷ್ಟಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ನಗರಸಭೆ ಗಮನಹರಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕಿಶೋರ ಶೇಜವಾಡಕರ್ ಆಗ್ರಹಿಸಿದರು.

ADVERTISEMENT

ಶಿರವಾಡ, ಮಖೇಋಇ ಗ್ರಾಮವನ್ನು ಒಳಗೊಂಡಿರುವ ಗ್ರಾಮ ಪಂಚಾಯ್ತಿಯ ಜನಸಂಖ್ಯೆ ಅಂದಾಜು 10 ಸಾವಿರದಷ್ಟಿದೆ. ಈ ಪೈಕಿ ಬಹುಪಾಲು ದೂರದ ಊರುಗಳಿಂದ ಬಂದು ನೆಲೆನಿಂತ ಕಾರ್ಮಿಕರಿದ್ದಾರೆ. ಕೈಗಾರಿಕಾ ವಸಾಹತು ಪ್ರದೇಶ ಇರುವ ಕಾರಣ ಕಾರ್ಮಿಕರು ಹೆಚ್ಚು ನೆಲೆಸಿದ್ದಾರೆ. ರಸ್ತೆ, ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಿದೆ.

ಬಂಗಾರಪ್ಪ ನಗರದಲ್ಲಿ 200ಕ್ಕೂ ಹೆಚ್ಚು ಪರಿಶಿಷ್ಟರು, ಅತಿಕ್ರಮಣ ಜಾಗದಲ್ಲಿ ವಾಸಿಸುತ್ತಿದ್ದಾರೆ. ಭೂಮಿ ಹಕ್ಕು ನೀಡಲು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆ, ಅಂಬೇಡ್ಕರ್ ವಸತಿ ಶಾಲೆ ಗ್ರಾಮದಲ್ಲಿದೆ. ಪುರಾಣ ಪ್ರಸಿದ್ಧ ಶೆಜ್ಜೇಶ್ವರ ದೇವಸ್ಥಾನ ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೇಜವಾಡದಲ್ಲಿದೆ.

ಜಲಮೂಲಗಳ ಕೊರತೆ:

ಶಿರವಾಡ ಗ್ರಾಮ ಪಂಚಾಯ್ತಿಯಲ್ಲಿ 35ಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಸಾವಿರಾರು ಸಂಖ್ಯೆಯ ಮನೆಗಳಿವೆ. ಸದ್ಯ ಗ್ರಾಮಕ್ಕೆ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆಸರೆಯಾಗಿದೆ. ಬೇಸಿಗೆಯಲ್ಲಿ ಅಗತ್ಯ ಪ್ರಮಾಣದ ನೀರು ದೊರೆಯುವುದು ಕಷ್ಟವಾಗಿದೆ.

‘ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯಿಸುವ ಪ್ರಯತ್ನ ನಡೆದರೂ ನೀರು ಸಿಗಲಿಲ್ಲ. ಜಲಮೂಲಗಳು ಲಭ್ಯವಿಲ್ಲ. ಹೀಗಾಗಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಪಿಡಿಒ ಅರುಣಾ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೇತುವೆ, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ.

– ಅಶ್ವಿನಿ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.