ಪ್ರಜ್ವಲ್ ರೇವಣ್ಣ
ದಾಂಡೇಲಿ: ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯವೆಸಗಿ ಅವುಗಳನ್ನು ವಿಡಿಯೊ ಚಿತ್ರೀಕರಿಸಿಕೊಂಡ ಅಪರಾಧ ಸಾಬೀತಾದ ಕಾರಣ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ನೀಡಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಡಿ. ಸ್ಯಾಮಸನ್ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣನ ಈ ವಿಕೃತ ಪ್ರಕರಣ ಹೊರಬಂದಾಗಿನಿಂದ ಮಹಿಳಾ ಸಂಘಟನೆಗಳು, ಡಿವೈಎಫ್ಐ ಸೇರಿದಂತೆ ರಾಜ್ಯದ ಎಲ್ಲ ಜನಪರ ಚಳುವಳಿಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ, ಸೂಕ್ತ ಶಿಕ್ಷೆ ವಿಧಿಸಲು ಒತ್ತಾಯಿಸಿದ್ದವು. ಈ ಪ್ರಕರಣವನ್ನು ಸಮರ್ಥವಾಗಿ ತನಿಖೆ ಮಾಡಿ ಪ್ರಕರಣವನ್ನು ನ್ಯಾಯಾಲಯದ ಮುಂದೆ ಸಮರ್ಥವಾಗಿ ಮಂಡಿಸಿದ, ಸಂತ್ರಸ್ತೆ ಪರವಾಗಿ ವಾದ ಮತ್ತು ಸಾಕ್ಷಿ ಮಂಡಿಸಿದ ಎಸ್.ಐ.ಟಿ. ಅಧಿಕಾರಿಗಳಿಗೆ ಹಾಗೂ ಸಂತ್ರಸ್ತರ ಪರವಾಗಿ ನಿಂತ ಹಾಸನ ಜಿಲ್ಲೆಯ ಜನಪರ ಚಳುವಳಿ ಮತ್ತು ನಾಗರಿಕರಿಗೆ ಅಭಿನಂದನೆ ತಿಳಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅಶ್ಲೀಲ ವಿಡಿಯೊಗಳನ್ನು ಪೆನ್ ಡ್ರೈವ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿರುವ ಹೀನ ಮನಸ್ಥಿತಿಯವರಿಗೂ ಸೂಕ್ತ ಶಿಕ್ಷೆ ನೀಡಬೇಕು ಡಿವೈಎಫ್ಐ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.