ಕಾರವಾರ/ಹೊಸಪೇಟೆ: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಿದ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಶಾಸಕ
ಸತೀಶ ಸೈಲ್ ಅವರ ಕಾರವಾರದ ಮನೆಯಲ್ಲಿ ಮತ್ತು ಉದ್ಯಮಿಗಳಾದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಹೊಸಪೇಟೆಯ ಮನೆಗಳು, ಕಚೇರಿಗಳಲ್ಲಿ ಬುಧವಾರ ಶೋಧ ನಡೆಸಿದರು. ಸಂಜೆಯವರೆಗೂ ಪರಿಶೀಲನೆ ನಡೆಯಿತು.
‘ಇ.ಡಿ ಅಧಿಕಾರಿ ಕೇಶವ ರಾವ್ ನೇತೃತ್ವದಲ್ಲಿ 24 ಮಂದಿಯ ತಂಡ ಕಾರವಾರದಲ್ಲಿ ಪರಿಶೀಲನೆ ನಡೆಸಿತು. ಮನೆಯಲ್ಲಿ ಶಾಸಕ ಸೈಲ್ ಅವರ ಅತ್ತೆ (ಪತ್ನಿಯ ತಾಯಿ) ಮತ್ತು ಮನೆ ಕೆಲಸದವರು ಇದ್ದರು. ವಿಷಯ
ತಿಳಿದರೂ ಸತೀಶ ಸೈಲ್ ಮತ್ತು ಅವರ ಬೆಂಬಲಿಗರು ಮನೆಯ ಬಳಿ ಸುಳಿಯಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ಉದ್ಯಮಿಗಳಾದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆಗಳು, ಕಚೇರಿಗಳು ಸೇರಿ ಒಟ್ಟು ಆರು ಕಡೆ ಪರಿಶೀಲನೆ ನಡೆಯಿತು.
‘ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಈ ಇಬ್ಬರೂ ಬಂಧಿತರಾಗಿದ್ದರು. ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ನಡೆಸಿದ್ದನ್ನು ಗಮನಿಸಿ ಈಗ ದಾಳಿ ನಡೆದಿರುವ ಸಾಧ್ಯತೆ ಇದೆ’ ಎಂದು
ಲೆಕ್ಕಪರಿಶೋಧಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.