ADVERTISEMENT

ಉತ್ತರ ಕನ್ನಡ: ಮುಖ್ಯ ಶಿಕ್ಷಕರಿಗೆ ಭಾರವಾದ ಮೊಟ್ಟೆ ದರ

ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಅಳಲು:ಖರೀದಿ, ದಾಸ್ತಾನಿಗೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 6:52 IST
Last Updated 3 ಜನವರಿ 2025, 6:52 IST
ದಾಂಡೇಲಿಯ ಶಾಲೆಯೊಂದರಲ್ಲಿ ಬಿಸಿಯೂಟದ ಸಿಬ್ಬಂದಿ ಮೊಟ್ಟೆ ಸರಬರಾಜು ವಾಹನದಿಂದ ಮೊಟ್ಟೆ ಪಡೆಯುತ್ತಿರುವುದು
ದಾಂಡೇಲಿಯ ಶಾಲೆಯೊಂದರಲ್ಲಿ ಬಿಸಿಯೂಟದ ಸಿಬ್ಬಂದಿ ಮೊಟ್ಟೆ ಸರಬರಾಜು ವಾಹನದಿಂದ ಮೊಟ್ಟೆ ಪಡೆಯುತ್ತಿರುವುದು   

ದಾಂಡೇಲಿ: ನಿರಂತರವಾಗಿ ಏರಿಕೆಯಾಗುತ್ತಿರುವ ಮೊಟ್ಟೆಯ ದರದ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಶಿಕ್ಷಕರಿಗೆ ಹೊರೆಯಾಗುತ್ತಿರುವ ದೂರು ವ್ಯಾಪಕವಾಗಿದೆ.

ಅಜೀಂ ಪ್ರೇಮ್‍ಜೀ ಫೌಂಡೇಶನ್ ಜೊತೆಗಿನ ಒಪ್ಪಂದದ ನಂತರ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ವಾರಕ್ಕೆ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಮೊಟ್ಟೆ ದರ ನಿರಂತರವಾಗಿ ಹೆಚ್ಚಾಗುತ್ತಿದ್ದು ಶಾಲೆಗಳಲ್ಲಿ ಮೊಟ್ಟೆ ಪೂರೈಸಲು ಮುಖ್ಯ ಶಿಕ್ಷಕರು ಪರದಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 48 ಶಾಲೆಗಳಲ್ಲಿ 7,600 ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಮೊಟ್ಟೆ ತಿನ್ನದಿರುವ ಮಕ್ಕಳಿಗೆ ಬಾಳೆ ಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ.

ADVERTISEMENT

‘ಸರಾಸರಿ ₹5.50 ಇದ್ದ ಮೊಟ್ಟೆ ದರ ಕೆಲವು ತಿಂಗಳಿಂದ ₹6.50–₹7ಕ್ಕೆ ಏರಿಕೆಯಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರತಿ ಮೊಟ್ಟೆ ಖರೀದಿಗೆ ₹6 ದರ ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚುವರಿ ದರವನ್ನು ಸ್ವಂತ ವೆಚ್ಚದಿಂದ ಭರಿಸಬೇಕಾದ ಸ್ಥಿತಿ ಉಂಟಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಮುಖ್ಯ ಶಿಕ್ಷಕರೊಬ್ಬರು ಸಮಸ್ಯೆ ಹೇಳಿಕೊಂಡರು.

‘ಪ್ರತಿ ಮೊಟ್ಟೆಗೆ ₹6 ಸರ್ಕಾರ ನೀಡುತ್ತಿದ್ದು, ಇದರಲ್ಲಿ ಮೊಟ್ಟೆ ಬೇಯಿಸಲು ವ್ಯಯಿಸಿದ ಇಂಧನ ಹಾಗೂ ಮೊಟ್ಟೆ ಸುಲಿಯಲು ಪಾವತಿಸಬೇಕು. ಮಾರುಕಟ್ಟೆಯಲ್ಲಿ ಮೊಟ್ಟೆಯೂ ಸರಿಯಾಗಿ ಸಿಗುತ್ತಿಲ್ಲ. ನಿತ್ಯವೂ ಮೊಟ್ಟೆಗಳನ್ನು ತಂದು ನೀಡಬೇಕು. ಮರುದಿನಕ್ಕೆ ಬೇಕಾಗುವಷ್ಟು ಮೊಟ್ಟೆಗಳನ್ನು ಶಾಲೆಯಲ್ಲಿ ಇಟ್ಟರೆ ಹೆಗ್ಗಣ ಹಾವುಗಳ ಕಾಟಕ್ಕೆ ದಾಸ್ತಾನು ಮಾಡುವುದು ಕಷ್ಟ. ಸ್ಥಳೀಯವಾಗಿ ಮೊಟ್ಟೆ ಸಂಗ್ರಹಿಸಿ ನೀಡಿ ಎಂದು ಅಧಿಕಾರಿಗಳು ಮೌಖಿಕವಾಗಿ ಹೇಳುತ್ತಾರೆ. ಗ್ರಾಮೀಣ ಭಾಗದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಸಿಗುವುದಿಲ್ಲ. ನಿತ್ಯ ಮಾರುಕಟ್ಟೆಯಿಂದ ಖರೀದಿಸಿ ತರಬೇಕು. ಶಾಲಾ ಒತ್ತಡ ಕೆಲಸಗಳಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸಲು ಕಷ್ಟವಾಗುತ್ತಿದೆ’ ಎಂದು ವಿವರಿಸಿದರು.

‘ಧಾರವಾಡ, ಬೆಳಗಾವಿ, ಕೊಪ್ಪಳ, ಹುಬ್ಬಳ್ಳಿ ಮುಂತಾದ ಕಡೆಯಿಂದ ಮೊಟ್ಟೆಯನ್ನು ತಂದು ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಮೊಟ್ಟೆ ಪೂರೈಕೆ ಇಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲಿ ಮೊಟ್ಟೆ ಸಗಟು ಬೆಲೆಯಲ್ಲಿ ₹6.50 ಹೆಚ್ಚಾಗಿದ್ದು, ಚಿಲ್ಲರೆ ವ್ಯಾಪಾರದಲ್ಲಿ ₹7ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಶಾಲೆಗಳಿಗೆ ಮೊಟ್ಟೆ ಸರಬುರಾಜು ಮಾಡುತ್ತಿರುವ ವ್ಯಾಪಾರಿ ಪರ್ವೇಜ್ ಸನದಿ ಹೇಳಿದರು.

ಮೊಟ್ಟೆ ದರ ಹೆಚ್ಚಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮುಖ್ಯ ಶಿಕ್ಷಕರಿಗೆ ಈಗ ನೀಡಿರುವ ಅನುದಾನದಲ್ಲಿಯೇ ಹೊಂದಾಣಿಕೆ ಮಾಡುವಂತೆ ತಿಳಿಸಲಾಗಿದೆ.
–ಸಂಗಮೇಶ ನೂಲ್ವಿ, ಅಕ್ಷರ ದಾಸೋಹ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.