ADVERTISEMENT

ಚನ್ನಬಸವೇಶ್ವರ ಜಾತ್ರೆ | ಭಕ್ತರಿಗೆ ಅನುಕೂಲವಾಗಲು ಸಹಾಯವಾಣಿ ನೀಡಿ: ಶ್ರವಣಕುಮಾರ

ಉಳವಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:45 IST
Last Updated 28 ನವೆಂಬರ್ 2025, 4:45 IST
ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ನಡೆದ ಚೆನ್ನಬಸವೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕಾರವಾರ ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ ಮಾತನಾಡಿದರು 
ಜೊಯಿಡಾ ತಾಲ್ಲೂಕಿನ ಉಳವಿಯಲ್ಲಿ ನಡೆದ ಚೆನ್ನಬಸವೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕಾರವಾರ ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ ಮಾತನಾಡಿದರು    

ಜೊಯಿಡಾ: ‘ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಧಿಕಾರಿಗಳು ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ ಭಕ್ತರಿಗೆ ಅನುಕೂಲವಾಗಲು ಸಹಾಯವಾಣಿ ಸಂಖ್ಯೆಯನ್ನು ಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ಗೆ ನೀಡಬೇಕು. ಟ್ರಸ್ಟ್‌ನವರು ಎಲ್ಲ ಸಹಾಯವಾಣಿ ಸಂಖ್ಯೆಗಳ ಫಲಕವನ್ನು ಪ್ರಮುಖ ಬೀದಿಗಳಲ್ಲಿ ಅಳವಡಿಸಬೇಕು’ ಎಂದು ಕಾರವಾರ ಉಪ ವಿಭಾಗಾಧಿಕಾರಿ ಪಿ.ಶ್ರವಣಕುಮಾರ ಸೂಚಿಸಿದರು.

2025ರ ಜ.25ರಿಂದ ಫೆ.5 ವರೆಗೆ ನಡೆಯಲಿರುವ ಜೊಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಪೂರ್ವಭಾವಿ ಸಭೆಯನ್ನು ಬುಧವಾರ ನಡೆಸಿ  ಮಾತನಾಡಿದರು.

ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಚಕ್ಕಡಿಗಳು ಬರುವುದರಿಂದ ಪೊಟೋಲಿ ಮಾರ್ಗದಲ್ಲಿ ಕುಸಿದಿರುವ ಸೇತುವೆ ನಿರ್ಮಾಣ ಕಾಮಗಾರಿ ಆಗದಿದ್ದಲ್ಲಿ ತಾತ್ಕಾಲಿಕ ರಸ್ತೆ ವ್ಯವಸ್ಥೆ ಮಾಡಬೇಕು. ಕುಂಬಾರವಾಡ-ಉಳವಿ, ಪೊಟೋಲಿ - ಉಳವಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಆಯಾ ಇಲಾಖೆಯ ಅಧಿಕಾರಿಗಳು ಜಾತ್ರೆ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಡಿಸೆಂಬರ್ ಅಂತ್ಯದೊಳಗೆ ತಹಶೀಲ್ದಾರ್‌ಗೆ ಲಿಖಿತ ಮಾಹಿತಿ ನೀಡಬೇಕು’ ಎಂದರು.

ADVERTISEMENT

ಜಾತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಟ್ರಸ್ಟ್‌ನವರು ಸರ್ಕಾರದ ಮೇಲೆ ಅವಲಂಬನೆಯಾಗದೆ ದೇವಸ್ಥಾನದವರು ಬಾಡಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು. ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆಗಾಗಿ ಕನಿಷ್ಠ ನೂರು ಜನರನ್ನು ನೇಮಿಸಬೇಕು. ಶಾಸಕರ ವಿಶೇಷ ಅನುದಾನ ಅಥವಾ 15 ನೇ ಹಣಕಾಸು ಆಯೋಗದ ಅನುದಾನದಲ್ಲಿ ಜಾತ್ರೆಗೆ ವಿಶೇಷ ಅನುದಾನ ನೀಡಿ ಬೀದಿ ದೀಪಗಳು, ಸ್ವಚ್ಛತೆ ಮುಂತಾದ ಕಾರ್ಯಗಳನ್ನು ಮಾಡಬೇಕು ಎಂದು ವಿವಿಧ ಭಾಗಗಳಿಂದ ಬಂದ ಭಕ್ತರು ಆಗ್ರಹಿಸಿದರು. 

 ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ ಡಿಸೆಂಬರ್ ಅಂತ್ಯದೊಳಗೆ ಚಂದ್ರಾಳಿಯಿಂದ ಬೋಗಾಳಿಯರವರೆಗೆ ಗುಂಡಿಗಳನ್ನು ಮುಚ್ಚಲಾಗುವುದು ಹಾಗೂ ಕೆಲವು ಭಾಗಗಳಲ್ಲಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಿವಾನಂದ ಮದರಕಂಡಿ, ‘ಅವಘಡಗಳು ಸಂಭವಿಸದಂತೆ ಎಲ್ಲ ಇಲಾಖೆಗಳು ಎಸ್ಒಪಿ ಪಾಪಿಸಬೇಕು. ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಕಡ್ಡಾಯವಾಗಿದ್ದು, ಟ್ರಸ್ಟ್‌ನವರು ತಾಲ್ಲೂಕಿನ ಎಲ್ಲ ಸಂಬಂಧಿಸಿದ ಇಲಾಖೆಗಳಿಂದ ನೀರಪೇಕ್ಷಣಾ ಪ್ರಮಾಣ ಪತ್ರ ಪಡೆದು ಅನುಮತಿಗೆ ಅರ್ಜಿ ಸಲ್ಲಿಸಬೇಕು. ಚಕ್ಕಡಿಗಳಿಗೆ ಕಡ್ಡಾಯವಾಗಿ ರೇಡಿಯ್ಂ ಅಳವಡಿಸಬೇಕು. ಎತ್ತುಗಳಿಗೆ ನಶೆ ಏರುವ ಪದಾರ್ಥಗಳು ನೀಡಿ, ಅವುಗಳಿಗೆ ಹಾನಿಯಾದರೆ ಮಾಲೀಕನ ಮೇಲೆ ಪ್ರಕರಣ ದಾಖಲಿಸಲಾಗುವುದು, ಜನಸಂದಣಿ ತಡೆಯುವ ನಿಟ್ಟಿನಲ್ಲಿ ರಥೋತ್ಸವ ಸಂದರ್ಭದಲ್ಲಿ ಟ್ರಸ್ಟ್‌ನವರು ಡಿಜಿಟಲ್ ಸ್ಕ್ರೀನ್ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ಜಾನುವಾರುಗಳಿಗೆ ಹಿಂಸೆ ನೀಡಿ ಚಕ್ಕಡಿಗಳನ್ನು ಜಾತ್ರೆಗೆ ತರಬಾರದು ಹಾಗೂ ಚಕ್ಕಡಿ ಮತ್ತು ಟ್ರ್ಯಾಕ್ಟರ್ ಉತ್ಸವವನ್ನು ಜಾತ್ರೆಯ ಹಿಂದಿನ ದಿನ ಮಾಡಬೇಕು ಎಂದು ಟ್ರಸ್ಟ್‌ನವರು ಮನವಿ ಮಾಡಿದರು.

ಫೆ.3ರಂದು ಮಹಾರಥೋತ್ಸವ ನಡೆಯಲಿದೆ.

ಸಭೆಯಲ್ಲಿ ಕೆಎಸ್‌ಆರ್‌ಟಿಸಿ, ಹೆಸ್ಕಾಂ, ಆರೋಗ್ಯ, ಪಶು ಇಲಾಖೆ,ಅಬಕಾರಿ, ಅರಣ್ಯ ಮುಂತಾದ ಇಲಾಖೆಯ ಸೇವೆಗಳು ಮತ್ತು ಕಾರ್ಯಗಳ ಕುರಿತು ಚರ್ಚೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿದರು.

ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಎನ್, ಸಿಪಿಐ ಚಂದ್ರಶೇಖರ ಹರಿಹರ, ಟ್ರಸ್ಟ್ ಅಧ್ಯಕ್ಷ ಗಂಗಾಧರ ಕಿತ್ತೂರ, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ ಮುಂತಾದವರು ಇದ್ದರು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ ಅವರಿಗೆ ಮೌನಾಚರನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.