ADVERTISEMENT

ಕರಾವಳಿಯ ಮೀನುಗಾರಿಕೆ, ಬಂದರಿನ ತುರ್ತು ಕೆಲಸಕ್ಕೆ ಆದ್ಯತೆ: ಸಚಿವ ಅಂಗಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 14:31 IST
Last Updated 7 ಜೂನ್ 2021, 14:31 IST
ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಸೋಮವಾರ ಭೇಟಿ ನೀಡಿದ ಸಚಿವ ಎಸ್.ಅಂಗಾರ ಜೆಟ್ಟಿ ಪ್ರದೇಶವನ್ನು ವೀಕ್ಷಿಸಿದರು. ಶಾಸಕಿ ರೂಪಾಲಿ ನಾಯ್ಕ ಚಿತ್ರದಲ್ಲಿದ್ದಾರೆ.
ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿಗೆ ಸೋಮವಾರ ಭೇಟಿ ನೀಡಿದ ಸಚಿವ ಎಸ್.ಅಂಗಾರ ಜೆಟ್ಟಿ ಪ್ರದೇಶವನ್ನು ವೀಕ್ಷಿಸಿದರು. ಶಾಸಕಿ ರೂಪಾಲಿ ನಾಯ್ಕ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಜಿಲ್ಲೆಯ ಕರಾವಳಿಯ ಮೀನುಗಾರರ ಸಮಸ್ಯೆಗಳ ಬಗ್ಗೆ ಜೂನ್ 11ರಂದು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ತುರ್ತಾಗಿ ಆಗಬೇಕಿರುವ ಕೆಲಸಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿರುವ ಅವರು, ಸೋಮವಾರ ಕಾರವಾರದ ಮಾಜಾಳಿ, ದೇವಭಾಗ ಕಡಲತೀರ, ಕಾರವಾರ ವಾಣಿಜ್ಯ ಬಂದರು ಪ್ರದೇಶಗಳನ್ನು ಪರಿಶೀಲಿಸಿದರು. ಬಳಿಕ ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕರಾವಳಿಯಲ್ಲಿ ಮೀನುಗಾರರು ಅನೇಕ ಸಮಸ್ಯೆಗಳನ್ನುಎದುರಿಸುತ್ತಿದ್ದಾರೆ. ವಿವಿಧ ಬಂದರುಗಳ ಅಭಿವೃದ್ಧಿ ಆಗಬೇಕಿದೆ. ತೌತೆ ಚಂಡಮಾರುತ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ಆಗಿರುವ ಹಾನಿಯ ಬಗ್ಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದಾರೆ. ಅವುಗಳನ್ನು ಖುದ್ದು ಪರಿಶೀಲಿಸುತ್ತಿದ್ದು, ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಈ ಬಗ್ಗೆ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಭೇಟಿಯಾಗಿ ತುರ್ತು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಸಂಶಯ ಬೇಡ’

‘ಮಾಜಾಳಿಯಲ್ಲಿ ಬಂದರು ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ. ಸ್ಥಳೀಯ ನಾಡದೋಣಿ ಮೀನುಗಾರರು ತಮಗೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ. ಅವರಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ತಾಂತ್ರಿಕವಾಗಿ ಏನೇನು ಅಗತ್ಯವಿದಯೋ ಅವುಗಳನ್ನು ಗಮನದಲ್ಲಿ ಇಟ್ಟುಕೊಂಡು ಬಂದರು ಅಭಿವೃದ್ಧಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಸಾಂಪ್ರದಾಯಿಕ ಮೀನುಗಾರರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಲಾಕ್‌ಡೌನ್‌ ಸಂಬಂಧ ಮೀನುಗಾರರಿಗೆ ರಾಜ್ಯ ಸರ್ಕಾರ ಪ್ರಕಟಿಸಿದ ಪ್ಯಾಕೇಜ್‌ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ’ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ‘ಮೀನುಗಾರರಿಗೆ ಘೋಷಿಸಿದ ಪರಿಹಾರದ ಪ್ಯಾಕೇಜ್ ಇನ್ನೂ ಸರಿಯಾಗಿ ಆಗಿಲ್ಲ. ಮೊದಲ ಪ್ಯಾಕೇಜ್‌ನಲ್ಲಿ ಈ ಸಮುದಾಯವನ್ನು ಬಿಟ್ಟಿದ್ದಾಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಆರ್ಥಿಕ ನೆರವಿನ ಅಗತ್ಯತೆಯನ್ನು ವಿವರಿಸಿದ್ದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರ ಪ್ರಕಟಿಸಿದ್ದಾರೆ. ಈಗ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು‌’ ಎಂದು ಭರವಸೆ ನೀಡಿದರು.

‘ಮೀನುಗಾರಿಕಾ ದೋಣಿಗಳಿಗೆ ಇನ್ನಷ್ಟು ಸಬ್ಸಿಡಿ ಡೀಸೆಲ್ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದೂ ಹೇಳಿದರು.

ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಸದಸ್ಯರು, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಇದ್ದರು.

‘ಪ್ಯಾಕೇಜ್ ಗೊಂದಲ ನಿವಾರಿಸಿ’

ರಾಜ್ಯ ಸರ್ಕಾರವು ಘೋಷಿಸಿದ ಆರ್ಥಿಕ ಪ್ಯಾಕೇಜ್‍ನಲ್ಲಿ ಆಗಿರುವ ಗೊಂದಲವನ್ನು ನಿವಾರಿಸಬೇಕು ಎಂದು ಯುವ ಮೀನುಗಾರರ ಸಂಘರ್ಷ ಸಮಿತಿಯು ಮೀನುಗಾರಿಕಾ ಸಚಿವರನ್ನು ಒತ್ತಾಯಿಸಿದೆ.

ಬೈತಖೋಲ್‌ನಲ್ಲಿ ಸಚಿವ ಅಂಗಾರ ಅವರಿಗೆ ಮನವಿ ಸಲ್ಲಿಸಿದ ಸಮಿತಿಯ ಅಧ್ಯಕ್ಷ ವಿನಾಯಕ ಹರಿಕಂತ್ರ, ‘
ಕೇಂದ್ರ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದ 18,746 ಮೀನುಗಾರರಿಗೆ ಮಾತ್ರ ತಲಾ ₹ 3,000 ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದು ಮೀನುಗಾರರಲ್ಲಿ ತಾರತಮ್ಯಕ್ಕೆ ಕಾರಣವಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪರಿಹಾರ ಯೋಜನೆಯಡಿ ಜಿಲ್ಲೆಯ ಮೀನುಗಾರಿಕೆ ಸಹಕಾರ ಸಂಘಗಳಲ್ಲಿ 2020– 21ನೇ ಸಾಲಿನಲ್ಲಿ ನೋಂದಣಿ ಆಗಿರುವ ಮೀನುಗಾರರು ಕೇವಲ 7,460. ಈಗಿನ ನೀತಿಯ ಪ್ರಕಾರ ಇವರಷ್ಟೇ ಆರ್ಥಿಕ ಪ್ಯಾಕೇಜ್ ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ ಈ ಗೊಂದಲವನ್ನು ಸರಿಪಡಿಸಿ ಸಕ್ರಿಯವಾಗಿರುವ ಮೀನುಗಾರರಿಗೆ ನೆರವು ನೀಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

*****

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನಾವೆಲ್ಲ ಸಂಘಟನೆಯಿಂದ ಬಂದವರು. ಯಾರದ್ದೇ ನಾಯಕತ್ವ ಇದ್ದರೂ ಪರಿಸ್ಥಿತಿ ಅರಿತು ಕೆಲಸ ಮಾಡುತ್ತೇವೆ.

– ಎಸ್.ಅಂಗಾರ, ಮೀನುಗಾರಿಕಾ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.