ADVERTISEMENT

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ: ಎರಡು ಶಾಲೆಗಳ ಬದಲಾವಣೆಗೆ ಪತ್ರ

ಕೆಲವೆಡೆ ಸ್ಥಳಾವಕಾಶದ ಕೊರತೆ

ಸದಾಶಿವ ಎಂ.ಎಸ್‌.
Published 10 ಮೇ 2019, 19:47 IST
Last Updated 10 ಮೇ 2019, 19:47 IST
   

ಕಾರವಾರ:ಈ ವರ್ಷದಿಂದ ಕಾರವಾರ ಶೈಕ್ಷಣಿಕ ಜಿಲ್ಲೆಯಸರ್ಕಾರಿಶಾಲೆಗಳಲ್ಲಿ ಆರಂಭವಾಗಲಿರುವ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ, ಎರಡು ಶಾಲೆಗಳನ್ನು ಬದಲಾಯಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ.

ಕಾರವಾರದ ಕೆ.ಜಿ.ಎಸ್ ಬದಲು ನಗರದ ಬಜಾರ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗೋಕರ್ಣದ ನಂ.2 ಶಾಲೆಯ ಬದಲು ನಾಡುಮಾಸ್ಕೇರಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಅಥವಾ ಗಂಗಾವಳಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವಂತೆ ಮನವಿ ಮಾಡಿದ್ದಾರೆ.

ಇಂಗ್ಲಿಷ್ ಮಾಧ್ಯಮ ಆರಂಭವಾದರೆ ಬೇರೆ ಶಾಲೆಗಳಿಗೆ ಹೋಗುತ್ತಿರುವ ಮತ್ತಷ್ಟು ಮಕ್ಕಳು ದಾಖಲಾತಿ ಬಯಸುವ ಸಾಧ್ಯತೆಯಿದೆ. ಇದರಿಂದ ಮೂಲ ಸೌಕರ್ಯದ ಕೊರತೆಯಾಗುವ ಸಂಭವವಿದೆ. ಕೇವಲ ಎರಡು ಶಾಲೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಉಳಿದ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಎಲ್ಲೆಲ್ಲಿ ಬದಲಾವಣೆಗೆ ಮನವಿ?:‘ಮೊದಲು ಗುರುತಿಸಲಾಗಿದ್ದ ಎರಡೂ ಶಾಲೆಗಳಲ್ಲಿ ಸ್ಥಳಾವಕಾಶದ ಕೊರತೆಯಿದೆ. ಹಾಗಾಗಿಅಲ್ಲಿ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇವೆ. ಅಲ್ಲದೇ ಕುಮಟಾ ತಾಲ್ಲೂಕಿನ ಗಂಗಾವಳಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದ್ದೇವೆ. ಈ ಬದಲಾವಣೆಯನ್ನು ಹಿರಿಯ ಅಧಿಕಾರಿಗಳು ಮಾಡಿಕೊಡುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

ಉತ್ತರ ಕನ್ನಡದ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ತಲಾ 13ರಂತೆ ಒಟ್ಟು 26 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ, ಅಗತ್ಯ ಮೂಲ ಸೌಕರ್ಯಗಳು ಇರುವ ಶಾಲೆಗಳನ್ನು ಈ ಯೋಜನೆಗೆ ಗುರುತಿಸಲಾಗಿದೆ. ಇಂಗ್ಲಿಷ್ ಶಿಕ್ಷಣ ಬೋಧಿಸುವ ಶಾಲೆಗಳಲ್ಲಿ ಕನ್ನಡ ವಿಭಾಗವೂ ಇರುತ್ತದೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಅನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳುಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.