ಕಾರವಾರ: ‘ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಸೀಮಿತ ಎಂಬ ತಪ್ಪು ಗ್ರಹಿಕೆ ಸಮಾಜದಲ್ಲಿದೆ. ಪರಿಸರವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕಾರ್ಯದಲ್ಲಿ ಇಡೀ ಸಮಾಜಕ್ಕೆ ಹೊಣೆಗಾರಿಕೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಹೇಳಿದರು.
ಇಲ್ಲಿನ ಡಿಸಿಎಫ್ ಕಚೇರಿ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗುರುವಾರ ಗೌರವ ಸಲ್ಲಿಸಿದ ಬಳಿಕ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಉತ್ತರ ಕನ್ನಡದ ಜನರು ಪರಿಸರ ಪ್ರೀತಿಸುತ್ತಾರೆ ಎಂಬುದಕ್ಕೆ ಇಲ್ಲಿ ಸಮೃದ್ಧ ಪರಿಸರ ಇರುವುದೇ ಸಾಕ್ಷಿ. ಜೊತೆಗೆ ಇಲ್ಲಿನ ಅರಣ್ಯ ಸಿಬ್ಬಂದಿಯೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ನಿಸ್ವಾರ್ಥವಾಗಿ, ಭಯವಿಲ್ಲದೆ ಅರಣ್ಯ ರಕ್ಷಣೆಯಲ್ಲಿ ತೊಡಗಿದ್ದಾರೆ. ಅರಣ್ಯ ರಕ್ಷಣೆಗಾಗಿ ಜೀವನ ಮುಡಿಪಿಟ್ಟ, ಬಲಿದಾನಗೈದವರನ್ನು ಸಮಾಜ ಎಂದಿಗೂ ಮರೆಯಬಾರದು’ ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ‘ಜಿಲ್ಲೆಯ ಅರಣ್ಯ ಪ್ರದೇಶವು ಪಕ್ಕದ ಜಿಲ್ಲೆಗಳು ಮತ್ತು ಗೋವಾ ರಾಜ್ಯದೊಂದಿಗೆ ಜೋಡಣೆಯಾಗಿದ್ದು, ಈ ಅರಣ್ಯ ಪ್ರದೇಶದಲ್ಲಿ ಅಕ್ರಮಗಳನ್ನು ತಡೆಯುವುದು ಸವಾಲಿನ ಕಾರ್ಯವಾಗಿದೆ. ಸವಾಲಿನ ನಡುವೆಯೂ ಅರಣ್ಯ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ’ ಎಂದರು.
ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ‘ಅರಣ್ಯ ಸಂಪತ್ತು, ಪರಿಸರ ಮತ್ತು ವನ್ಯಜೀವಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು ಕಾಪಾಡುತ್ತಿದ್ದಾರೆ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಕಾರವಾರ ಡಿಸಿಎಫ್ ಸಿ.ರವಿಶಂಕರ್, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಮಂಜುನಾಥ ಜಿ ನಾವಿ, ಸಿಆರ್‌ಝಡ್ ಪ್ರಾದೇಶಿಕ ನಿರ್ದೇಶಕ ಪ್ರವೀಣ್ ಬಸ್ರೂರು, ಎಸಿಎಫ್‌ಗಳಾದ ಕೆ.ಡಿ.ನಾಯ್ಕ, ಕೆ.ಸಿ.ಜಯೇಶ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.