ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಎಥನಾಲ್ ಟ್ಯಾಂಕರ್‌ಗೆ ಬೆಂಕಿ
ಯಲ್ಲಾಪುರ: ತಾಲ್ಲೂಕಿನ ಅರೆಬೈಲ್ ಘಟ್ಟದ ಮಾರುತಿ ದೇವಸ್ಥಾನದ ಸಮೀಪ ಶನಿವಾರ ಬೆಳಿಗ್ಗೆ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಬೆಂಕಿಗೆ ಸುಟ್ಟು ಕರಕಲಾಗಿದೆ.
ರಾಷ್ಟ್ರೀಯ ಹೆದ್ದಾರಿ-63ರಲ್ಲಿನ ಘಟ್ಟದ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಟ್ಯಾಂಕರ್ ಬಿದ್ದ ರಭಸಕ್ಕೆ ಇಂಧನ ಟ್ಯಾಂಕ್‌ಗೆ ಹಾನಿಯಾಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಎಥನಾಲ್ ತುಂಬಿದ್ದರಿಂದ ಬೆಂಕಿ ವ್ಯಾಪಿಸಿ ಟ್ಯಾಂಕರ್ ಸುಟ್ಟು ಕರಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟ್ಯಾಂಕರ್ ಚಾಲಕ ಸ್ಥಳದಿಂದ ದೂರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ ಕೇರಳಕ್ಕೆ ಎಥನಾಲ್ ಸಾಗಿಸಲಾಗುತ್ತಿತ್ತು ಎಂದು ಯಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆದ್ದಾರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಕೆಲವು ತಾಸು ಸಂಚಾರ ವ್ಯತ್ಯಯ ಉಂಟಾಗಿತ್ತು