ADVERTISEMENT

ಮದ್ಯಸಾರ ಅಕ್ರಮ ಸಾಗಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 14:37 IST
Last Updated 26 ಜುಲೈ 2022, 14:37 IST
ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯಸಾರವನ್ನು ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಸೋಮವಾರ ತಡರಾತ್ರಿ ವಶ ಪಡಿಸಿಕೊಂಡ ಅಬಕಾರಿ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿದರು
ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯಸಾರವನ್ನು ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಸೋಮವಾರ ತಡರಾತ್ರಿ ವಶ ಪಡಿಸಿಕೊಂಡ ಅಬಕಾರಿ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿದರು   

ಕಾರವಾರ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1,505 ಲೀಟರ್ ಮದ್ಯಸಾರವನ್ನು, ಅಬಕಾರಿ ತನಿಖಾ ತಂಡದ ಅಧಿಕಾರಿಗಳು ಮಾಜಾಳಿಯಲ್ಲಿ ಸೋಮವಾರ ತಡರಾತ್ರಿ ಜಪ್ತಿ ಮಾಡಿದ್ದಾರೆ. ಇಬ್ಬರನ್ನು ಬಂಧಿಸಿದ್ದಾರೆ.

ಲಾರಿಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ರಾಸಾಯನಿಕದ ಬಾಟಲಿಗಳನ್ನು ಪೆಟ್ಟಿಗೆಗಳಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಅವುಗಳೊಂದಿಗೆ ತಲಾ 35 ಲೀಟರ್‌ಗಳ 43 ಬಾಟಲಿಗಳಲ್ಲಿ ಸುಮಾರು ₹ 90,300 ಮೌಲ್ಯದ ಮದ್ಯಸಾರವನ್ನು ಬಚ್ಚಿಡಲಾಗಿತ್ತು. ರಾಸಾಯನಿಕದ ಬಾಟಲಿಗಳು ₹ 8.85 ಲಕ್ಷ ಹಾಗೂ ಲಾರಿಯು ₹ 12 ಲಕ್ಷ ಬೆಲೆಯದ್ದು ಎಂದು ಅಂದಾಜು ಮಾಡಲಾಗಿದೆ. ಒಟ್ಟು ₹ 21.75 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪುಟ್ಟನೂರು ಗ್ರಾಮದ ಶ್ರೀನಾಥ ಪೆರಿಯಣ್ಣನ್ ಹಾಗೂ ನಾಗಪಟ್ಟಿನಮ್ ಜಿಲ್ಲೆಯ ವಡವೂರಿನ ಸೆಂಥಿಲ್ ಕುಮಾರ್ ಆರ್ಮುಗಮ್ ಎಂದು ಗುರುತಿಸಲಾಗಿದೆ. ಲಾರಿಯ ಮಾಲೀಕನನ್ನು ಪತ್ತೆ ಹಚ್ಚಲಾಗುವುದು ಎಂದು, ಪ್ರಕರಣ ದಾಖಲಿಸಿಕೊಂಡಿರುವಜಿಲ್ಲಾ ತಂಡದ ನಿರೀಕ್ಷಕ ಬಸವರಾಜ ಕರವಿನಕೊಪ್ಪ ತಿಳಿಸಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ ಕಾರವಾರ ವಲಯ ನಿರೀಕ್ಷಕ ದಯಾನಂದ, ಉಪ ನಿರೀಕ್ಷಕಎಂ.ಎಂ.ನಾಯ್ಕ ಹಾಗೂ ಸಿಬ್ಬಂದಿ ಎನ್.ಜಿ.ಜೋಗಳೇಕರ, ಸುರೇಶ ಹಾರೂಗೊಪ್ಪ, ರಂಜನಾ ನಾಯ್ಕ, ವೀರೇಶ ಕುರಿಯವರ ಹಾಗೂ ಎನ್.ಎನ್.ಖಾನ್ ಪಾಲ್ಗೊಂಡಿದ್ದರು.

ಮದ್ಯ ವಶ:

ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 33.840 ಲೀಟರ್ ಮದ್ಯವನ್ನು ಮಾಜಾಳಿ ತನಿಖಾ ಠಾಣೆಯಲ್ಲಿ ಮಂಗಳೂರಿನ ಅಬಕಾರಿ ವಿಶೇಷ ದಳದ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಆನಂದ ಜಾಧವ್ ಮತ್ತು ರಾಜನ್ ಕೋಯರ್ ಪಾಟೀಲ ಎಂಬುವವರನ್ನು ಬಂಧಿಸಿದ್ದಾರೆ.

ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ, ಉಪ ಆಯುಕ್ತೆ ವನಜಾಕ್ಷಿ.ಎಂ ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಯಿತು. ಉಪ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್ ಪಿ.ಕೆ.ಹಳದನಕರ್, ಅಧಿಕಾರಿಗಳಾದ ಉಷಾ ಯಂಡಿಗೇರಿ, ಬಸವರಾಜ, ದಯಾನಂದ, ಸಿಬ್ಬಂದಿ ಶ್ರೀಧರ ಚೌಗಲೆ, ಎಂ.ಕೆ.ನಾಯ್ಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.