ADVERTISEMENT

ಭಟ್ಕಳದಲ್ಲಿ ದುರಂತ ನಡೆದು 13 ದಿನ: ಸರ್ಕಾರಕ್ಕೆ ಸಲ್ಲಿಕೆಯಾಗದ ಭೂಕುಸಿತ ವರದಿ

ಭಟ್ಕಳದಲ್ಲಿ ದುರಂತ ನಡೆದು 13 ದಿನ: ಕಾರಣವಾದ ಅಂಶಗಳ ಬಗ್ಗೆ ಜನರಿಗೂ ಕುತೂಹಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 15:57 IST
Last Updated 16 ಆಗಸ್ಟ್ 2022, 15:57 IST
ಮುಟ್ಟಳ್ಳಿ ಭೂಕುಸಿತ ಪ್ರದೇಶಕ್ಕೆ ಕೇಂದ್ರ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದ್ದರು (ಸಂಗ್ರಹ ಚಿತ್ರ)
ಮುಟ್ಟಳ್ಳಿ ಭೂಕುಸಿತ ಪ್ರದೇಶಕ್ಕೆ ಕೇಂದ್ರ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದ್ದರು (ಸಂಗ್ರಹ ಚಿತ್ರ)   

ಭಟ್ಕಳ: ತಾಲ್ಲೂಕಿನಲ್ಲಿ ಆ.2ರಂದು ಸಂಭವಿಸಿದ ನೆರೆ ಹಾವಳಿ ಹಾಗೂ ಭೂ ಕುಸಿತವಾಗಿ ಮಂಗಳವಾರಕ್ಕೆ 13 ದಿನಗಳು ಕಳೆದಿವೆ. ಆದರೆ, ಅದರ ಬಗ್ಗೆ ಅಧ್ಯಯನ ವರದಿಯು ಸರ್ಕಾರಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ.

ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ನಾಲ್ವರು ಮೃತಪಟ್ಟಿದ್ದರು. ಪಟ್ಟಣದಲ್ಲಿ ಭಾರಿ ಪ್ರವಾಹ ಉಂಟಾಗಿ ಕೋಟ್ಯಂತರ ರೂಪಾಯಿ ಹಾನಿಯಾಗಿತ್ತು. ಆ.4ರಂದೇ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದುರಂತದ ಬಗ್ಗೆ ಅಧ್ಯಯನ ನಡೆಸಿ ಮರುದಿನವೇ ಅಂದರೆ, ಆ.5ರಂದೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು.

ಈ ದುರ್ಘಟನೆ ನಡೆದ ಮುಟ್ಟಳ್ಳಿ ವ್ಯಾಪ್ತಿಯ ಹಲವೆಡೆ ಸ್ಥಳೀಯರು ಕಲ್ಲು ಕ್ವಾರಿಗಳ ಕೆಳ ಭಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಭಟ್ಕಳದಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಿಂದ ಅವರೆಲ್ಲ ಆತಂಕಗೊಂಡಿದ್ದಾರೆ. ಭಯದಲ್ಲೇ ದಿನದೂಡುತ್ತಿದ್ದಾರೆ. ತಾಲ್ಲೂಕು ಆಡಳಿತ ಕೂಡ ವಿವಿಧ ರೀತಿಯಲ್ಲಿ ಸ್ಪಂದಿಸಿದೆ. ಆದರೆ, ಅವರಿಗೆ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸ್ಥಿತಿಯಲಿಲ್ಲ.

ADVERTISEMENT

ತಾಲ್ಲೂಕು ಆಡಳಿತ ಸಲ್ಲಿಸುವ ವರದಿಯನ್ನು ಆಧರಿಸಿ ಗುಡ್ಡದ ತಪ್ಪಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಬಹುದಾಗಿದೆ. ವರದಿ ಸಲ್ಲಿಕೆಯು ವಿಳಂಬವಾದರೆ ಮತ್ತಷ್ಟು ಅನಾಹುತವಾದೀತು ಎಂಬ ಭೀತಿ ಸ್ಥಳೀಯರಲ್ಲಿದೆ. ಈಗಾಗಲೇ ಮುಟ್ಟಳ್ಳಿಯ ಎಕ್ಕಿಗೋಳಿ ಪ್ರದೇಶದಲ್ಲಿ ಗುಡ್ಡದ ಮಣ್ಣು ಕೆಳಗೆ ಜಾರಿದ್ದು, ತಪ್ಪಲಿನ ನಿವಾಸಿಗಳು ಕಳವಳಗೊಂಡಿದ್ದಾರೆ.

ಭೂಗರ್ಭ ವಿಜ್ಞಾನಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಭೂಕುಸಿತ, ನೀರು ಹರಿದು ಉಂಟಾಗಿರುವ ಸುರಂಗದಂಥ ಮಾದರಿಗಳನ್ನು ಪರಿಶೀಲಿಸಿದ್ದಾರೆ. ದುರಂತಕ್ಕೆ ಕಾರಣವೇನು ಮತ್ತು ಅವರ ಸಲಹೆಗಳೇನು ಎಂಬ ಬಗ್ಗೆ ಅಧ್ಯಯನ ವರದಿಯಲ್ಲಿ ಇರುವ ಉಲ್ಲೇಖಗಳ ಬಗ್ಗೆ ಜನರೂ ಕುತೂಹಲದಿಂದ ಕಾಯುತ್ತಿದ್ದಾರೆ.

‘ತಾಂತ್ರಿಕ ವರದಿಗೆ ಸೂಚನೆ’:

‌‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಟ್ಕಳಕ್ಕೆ ಬಂದು ಭೂಕುಸಿತದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಜಿಲ್ಲಾಡಳಿತವುಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಆದೇಶ ನೀಡಿ ತಾಂತ್ರಿಕ ವರದಿ ನೀಡುವಂತೆ ತಿಳಿಸಿದೆ. ಈಗಾಗಲೇ ಕೇಂದ್ರ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಭೂಕುಸಿತವಾದ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಅವರು ಸಲ್ಲಿಸುವ ವರದಿ ಆಧರಿಸಿ, ತಾಲ್ಲೂಕು ಆಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ’ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.