ADVERTISEMENT

ಕಾರವಾರ: ಡೇರಿ ಮುಚ್ಚಲು ಪ್ರಧಾನಿಗೆ ಆಹ್ವಾನ!

ಹಳ್ಳಕ್ಕೆ ಸೇತುವೆ ನಿರ್ಮಿಸಲು ಮನವಿ ಮಾಡಿ ಬೇಸತ್ತ ರೈತ ಕುಟುಂಬ

ಸದಾಶಿವ ಎಂ.ಎಸ್‌.
Published 5 ಜನವರಿ 2022, 19:30 IST
Last Updated 5 ಜನವರಿ 2022, 19:30 IST
ಕಾರವಾರ ತಾಲ್ಲೂಕಿನ ಕುಚೇಗಾರ ಗ್ರಾಮದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಯುವಕ ಗಣಪತಿ ಭಟ್
ಕಾರವಾರ ತಾಲ್ಲೂಕಿನ ಕುಚೇಗಾರ ಗ್ರಾಮದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಯುವಕ ಗಣಪತಿ ಭಟ್   

ಕಾರವಾರ: ‘ಮಾರ್ಚ್ 31ರಂದು ಬೆಳಿಗ್ಗೆ 10ಕ್ಕೆ ಡೇರಿ ವ್ಯವಹಾರವನ್ನು ಮುಚ್ಚುತ್ತೇವೆ. ಆ ಸಮಾರಂಭಕ್ಕೆ ದಯವಿಟ್ಟು ಆಗಮಿಸಬೇಕು!’

ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು, ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಕುಚೇಗಾರದ ರೈತ ಕುಟುಂಬವೊಂದು ಈ ರೀತಿ ವಿಶಿಷ್ಟವಾಗಿ ಆಮಂತ್ರಿಸಿದೆ.

ಪ್ರತಿಭಟನೆ ರೂಪದ ಆಹ್ವಾನ:

ADVERTISEMENT

ಇಲ್ಲಿನ ಮಹಾಬಲೇಶ್ವರ ಭಟ್, ತಮ್ಮ ಊರಿನ ದಾರಿಗೆ ಅಡ್ಡಲಾಗಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಹಲವು ಸಲ ಮನವಿ ಮಾಡಿ ಪ್ರಯೋಜನವಾಗದೇ ಬೇಸತ್ತು ಈ ರೀತಿಯ ಹೋರಾಟದ ದಾರಿ ಹಿಡಿದಿದ್ದಾರೆ.

ಅವರ ಹಿರಿಯ ಮಗ ಸೂರಜ್ ಪ್ರಸಾದ್, ಬಿ.ಬಿ.ಎ ಪದವೀಧರ. ಎರಡನೇ ಮಗ ಗಣಪತಿ ಬಿ.ಕಾಂ ಪದವೀಧರ. ಇಬ್ಬರೂ ಮನೆಗೆ ಹೊಂದಿಕೊಂಡೇ ಡೇರಿ ನಡೆಸುತ್ತಿದ್ದಾರೆ. ದಿನವೊಂದಕ್ಕೆ ಸುಮಾರು 80 ಲೀಟರ್‌ ಹಾಲನ್ನು 15 ಕಿಲೋಮೀಟರ್ ದೂರದ ಮಲ್ಲಾಪುರದ ಕೈಗಾ ಟೌನ್‌ಶಿಪ್‌ಗೆ ಪೂರೈಕೆ ಮಾಡುತ್ತಿದ್ದಾರೆ.

ಈ ಊರಿನ ದಾರಿಗೆ ಅಡ್ಡಲಾಗಿ ಹಳ್ಳವೊಂದು ಹರಿಯುತ್ತದೆ. ಅದಕ್ಕೆ ಕೆಲವು ವರ್ಷಗಳ ಹಿಂದೆ ಕಾಲುಸಂಕ ನಿರ್ಮಿಸಲಾಗಿದ್ದು, ನಾಲ್ಕು ಚಕ್ರದ ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಹಾಲು ಸಾಗಿಸಲು, ಹಿಂಡಿ,ಮೇವು ತೆಗೆದುಕೊಂಡು ಹೋಗಲು ಒಂದೂವರೆ ಕಿಲೋಮೀಟರ್ ತಲೆಹೊರೆಯಲ್ಲಿ ಸಾಗುವುದು ಅನಿವಾರ್ಯವಾಗಿದೆ. ಇದರಿಂದ ಬೇಸತ್ತು, ತಮ್ಮ ಬಳಿಯಿದ್ದ 17 ಆಕಳುಗಳಲ್ಲಿ ಏಳೆಂಟನ್ನು ಈಗಾಗಲೇ ಮಾರಾಟ ಮಾಡಿದ್ದಾರೆ.

ಊರಿನಲ್ಲಿ ಸುಮಾರು 20 ಕುಟುಂಬಗಳಿದ್ದು, ಯಾರಿಗಾದರೂ ಅನಾರೋಗ್ಯವಾದರೆ ಅವರನ್ನು ಜೋಳಿಗೆಯಲ್ಲಿ ಕೂರಿಸಿಕೊಂಡೇ ಹಳ್ಳದ ಸಮೀಪಕ್ಕೆ ಬರಬೇಕಿದೆ. ಈ ಎಲ್ಲ ಕಷ್ಟಗಳಿಗೆ ಪರಿಹಾರವಾಗಿ ಸೇತುವೆ ನಿರ್ಮಾಣವಾಗಬೇಕು ಎಂಬುದು ಇಲ್ಲಿನವರ ಬಹುದಿನಗಳ ಬೇಡಿಕೆಯಾಗಿದೆ.

‘ಕುಗ್ರಾಮಗಳಲ್ಲಿ ಇರುವ ಸಮಸ್ಯೆಗಳ ಅರಿವಾಗಲಿ ಎಂಬ ಕಾರಣಕ್ಕೆ ಸಚಿವರಾದ ಕೆ.ಎಸ್‌. ಈಶ್ವರಪ್ಪ, ಆರ್.ಅಶೋಕ, ಪ್ರಭು ಚವ್ಹಾಣ, ಶಿವರಾಮ ಹೆಬ್ಬಾರ ಅವರಿಗೂ ಇ–ಮೇಲ್ ಮೂಲಕ ಆಹ್ವಾನ ಕಳುಹಿಸಿದ್ದೇವೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಕೂಡ ಆಹ್ವಾನಿಸಿದ್ದೇವೆ’ ಎಂದು ಮಹಾಬಲೇಶ್ವರ ಭಟ್ ಹೇಳುತ್ತಾರೆ.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರವು ಕೃಷಿ, ಹೈನುಗಾರಿಕೆಗೆ ಕೊಡುವ ಪ್ರೋತ್ಸಾಹದಿಂದ ಮಕ್ಕಳಿಬ್ಬರೂ ಪ್ರೇರಿತರಾಗಿದ್ದರು. ಹಾಗಾಗಿ ದೂರದ ನಗರಗಳಲ್ಲಿ ಉದ್ಯೋಗ ಮಾಡುವ ಬದಲು ಸ್ವಾವಲಂಬಿಗಳಾಗಿ ಮನೆಯ ಬಳಿಯೇ ಡೇರಿ ಆರಂಭಿಸಿದ್ದರು. ಆದರೆ, ಸೇತುವೆ, ರಸ್ತೆಯ ಸೌಕರ್ಯವಿಲ್ಲದೇ ನಿರಾಸೆ ಅನುಭವಿಸುತ್ತಿದ್ದಾರೆ’ ಎಂದು ಬೇಸರದಿಂದ
ಹೇಳುತ್ತಾರೆ.

ಕಾಣದ ಪ್ರಗತಿ:

ಕುಗ್ರಾಮ ಕುಚೇಗಾರಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’, ಊರಿನ ಸ್ಥಿತಿಗತಿ ಬಗ್ಗೆ 2020ರ ಸೆ.8ರಂದು ‘ವೆಬ್‌ ಎಕ್ಸ್‌ಕ್ಲೂಸಿವ್’ ಹಾಗೂ ವಿಡಿಯೊ ವರದಿ ಪ್ರಕಟಿಸಿತ್ತು.

ಅದನ್ನು ಗಮನಿಸಿದ್ದ ಅಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಅ.27ರಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸೇತುವೆ ಮಂಜೂರು ಮಾಡಲು ಪ್ರಯತ್ನಿಸುವುದಾಗಿ ಮೌಖಿಕವಾಗಿ ತಿಳಿಸಿದ್ದರು. ಅಷ್ಟರಲ್ಲಿ ಅವರು ವರ್ಗಾವಣೆಯಾದರು. ಬಳಿಕ ಯಾವುದೇ ಬೆಳವಣಿಗೆ ಆಗಲಿಲ್ಲ ಎಂದು ಮಹಾಬಲೇಶ್ವರ ಭಟ್ ಬೇಸರ ವ್ಯಕ್ತಪಡಿಸುತ್ತಾರೆ.

* ಕುಚೇಗಾರಕ್ಕೆ ಭೇಟಿ ನೀಡುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗೆ ಸೂಚಿಸುತ್ತೇನೆ. ಗ್ರಾಮಕ್ಕೆ ಮೂಲಸೌಕರ್ಯ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.

– ಎಂ.ಪ್ರಿಯಾಂಗಾ, ಸಿ.ಇ.ಒ, ಜಿ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.