ADVERTISEMENT

ಕೃಷಿ ಕಾಯ್ದೆ ರದ್ದು: ಪರ, ವಿರೋಧ ಚರ್ಚೆ

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜಿಲ್ಲೆಯ ರೈತ ಮುಖಂಡರಲ್ಲಿ ಸಂತಸ, ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 14:25 IST
Last Updated 19 ನವೆಂಬರ್ 2021, 14:25 IST

ಕಾರವಾರ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ರೈತರ ಮುಖಂಡರಲ್ಲಿ ಕೆಲವರು ಇದು ರೈತರ ಹೋರಾಟಕ್ಕೆ ಜಯ ಎಂದು ಬಣ್ಣಿಸಿದರೆ, ಮತ್ತೆ ಕೆಲವರು ಇದು ರೈತರ ಆದಾಯವೃದ್ಧಿ ಯೋಜನೆಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

‘ಐತಿಹಾಸಿಕ ಪ್ರತಿರೋಧ’:

ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವ ಕೇಂದ್ರ ಸರ್ಕಾರದ ದೇಶ ವಿರೋಧಿ ಕಾಯ್ದೆಗಳನ್ನು ಪ್ರತಿರೋಧಿಸಿ, ದೇಶವ್ಯಾಪಿ ನಡೆದ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಇದು ದೇಶದ ರೈತರು, ಕಾರ್ಮಿಕರು ಹಾಗೂ ನಾಗರಿಕರಿಗೆ ಸಂದಿರುವ ಜಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಕ್ರಿಯಿಸಿದೆ.

ADVERTISEMENT

ಇದರಿಂದ ದೇಶದ ಕೃಷಿ ಹಾಗೂ ಸ್ವಾವಲಂಬನೆಯನ್ನು ಕಬಳಿಸುವ ಕಾರ್ಪೊರೇಟ್ ಕಂಪನಿಗಳ ಹುನ್ನಾರಕ್ಕೆ ತೀವ್ರ ಹಿನ್ನಡೆ ಆದಂತಾಗಿದೆ. ಆದರೆ, ನರೇಂದ್ರ ಮೋದಿ ಅವರ ಈ ಪ್ರಕಟಣೆಯು ಸಂಸತ್ತಿನಲ್ಲಿ ಪ್ರಕಟಿಸುವ ಮೂಲಕವೇ ನಿಜವಾಗಲಿದೆ. ಆದ್ದರಿಂದ ಈ ಕುರಿತು ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಸಂಘವು ಒತ್ತಾಯಿಸಿದೆ.

ಇದೇರೀತಿ, ರಾಜ್ಯದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯ ಸರ್ಕಾರವು ಜಾರಿಗೊಳಿಸಿದೆ. ಇವುಗಳನ್ನು ವಾಪಸ್ ಪಡೆಯುವ ಕುರಿತು ರಾಜ್ಯ ಸರ್ಕಾರ ಮೌನವಾಗಿದೆ. ಇದನ್ನು ಕರ್ನಾಟಕ ಪ್ರಾಂತ ರೈತ ಸಂಘವು ಖಂಡಿಸುತ್ತದೆ. ಈ ಕೃಷಿ ವಿರೋಧಿ ಕಾಯ್ದೆಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಮ ನಾಯಕ ಮತ್ತು ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಒತ್ತಾಯಿಸಿದ್ದಾರೆ.

ಕೇಂದ್ರದಿಂದ ಓಲೈಕೆ ರಾಜಕಾರಣ:

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ಕೇಂದ್ರ ಸರ್ಕಾರವು ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ತಾಹಿರ್ ಹುಸೇನ್ ಆರೋಪಿಸಿದ್ದಾರೆ.

ಕರಾಳವಾಗಿದ್ದ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸುವುದು ಸಂತಸದ ವಿಷಯ. ಇದಕ್ಕಾಗಿ ದೇಶದ ಎಲ್ಲಾ ರೈತರಿಗೆ ಹಾಗೂ ರೈತ ಪರ ಹೋರಾಟಗಾರರಿಗೆ ಅಭಿನಂದನೆಗಳು. ಕಾನೂನುಗಳು ರೈತ ವಿರೋಧಿಯಾಗಿವೆ ಎಂದು ಗೊತ್ತಿದ್ದೂ ರದ್ದುಗೊಳಿಸಲು ಇಷ್ಟೊಂದು ತಡಮಾಡಿದ್ದು ಖಂಡನೀಯ.ಇದೀಗ ಚುನಾವಣೆಗಳನ್ನು ಮುಂದಿಟ್ಟುಕೊಂಡು ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ ಎಂದು ಅವರು ಹೇಳಿದ್ದಾರೆ.

‘ರೈತರಿಗೆ ದೊಡ್ಡ ಹಾನಿ’:

‘ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದರಿಂದ ರೈತರಿಗೆ ದೊಡ್ಡ ಹಾನಿಯಾಗಲಿದೆ. ಮಾರುಕಟ್ಟೆಯಲ್ಲಿ ದರ ಸ್ಥಿರತೆ, ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕಾಯ್ದೆಗಳನ್ನು ಅವಕಾಶವಿತ್ತು. ಅದು ಈಗ ತಪ್ಪಿದೆ’ ಎಂದುಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

‘ಕೇಂದ್ರ ಸರ್ಕಾರವು ರೈತರ ಅಭ್ಯುದಯಕ್ಕೆ ಒಳ್ಳೆಯ ಕಾಯ್ದೆಗಳನ್ನು ರೂಪಿಸಿತ್ತು. 2022ನೇ ಇಸವಿಗೆ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರದ ಮಹತ್ವಾಕಾಂಕ್ಷೆಗೆ ಅವು ಪೂರಕವಾಗಿದ್ದವು. ಅಡಿಕೆ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ದರ ಸ್ಥಿರತೆಗೂ ಅದು ಕಾರಣವಾಗಿ, ಬೆಳೆದವರಿಗೆ ಲಾಭ ಸಿಗುತ್ತಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.