ADVERTISEMENT

ಕುಮಟಾ: ಕೋತಿ ಕಾಟಕ್ಕೆ ‘ದೊಡ್ಡ ಕವಣೆ’ ಕಡಿವಾಣ!

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 20:30 IST
Last Updated 11 ನವೆಂಬರ್ 2020, 20:30 IST
ಕುಮಟಾ ತಾಲ್ಲೂಕಿನ ಮೂರೂರು ಕಲ್ಲಬ್ಬೆಯಲ್ಲಿ ಕೃಷಿಕರು ಮಂಗಗಳನ್ನು ಓಡಿಸಲು ದೊಡ್ಡ ಕವಣೆಗಳನ್ನು ಉಪಯೋಗಿಸುತ್ತಿರುವುದು
ಕುಮಟಾ ತಾಲ್ಲೂಕಿನ ಮೂರೂರು ಕಲ್ಲಬ್ಬೆಯಲ್ಲಿ ಕೃಷಿಕರು ಮಂಗಗಳನ್ನು ಓಡಿಸಲು ದೊಡ್ಡ ಕವಣೆಗಳನ್ನು ಉಪಯೋಗಿಸುತ್ತಿರುವುದು   

ಕುಮಟಾ: ‘ಈಗೀಗ ಮಂಗಗಳು ಏರ್‌ಗನ್‌ಗಳಿಗೂ ಹೆದರುವುದಿಲ್ಲ. ಈಡು ಮಾಡಿದರೆ ತೆಂಗಿನ ಮರದ ಹೆಡೆಗಳ ಮರೆಯಲ್ಲಿ ಅವಿತು ಕುಳಿತು ತಪ್ಪಿಸಿಕೊಳ್ಳುತ್ತವೆ. ಅದಕ್ಕಾಗಿ ನಾವೇ ಕಂಡುಕೊಂಡು ಉಪಾಯ ಈ ದೊಡ್ಡ ಕವಣೆ...’

ತಾಲ್ಲೂಕಿನ ಮೂರೂರು – ಕಲ್ಲಬ್ಬೆಯ ರೈತರಾದ ವಿಶ್ವನಾಥ ಭಟ್ಟ ಹಾಗೂ ಗಣಪತಿ ಭಟ್ಟ ಕಂಡುಕೊಂಡ ಉಪಾಯವೀಗ ಗಮನ ಸೆಳೆಯುತ್ತಿದೆ.

‘ಇದರ ಬಿಗಿ ಹೊಡೆತಕ್ಕೆ ಕೆಲವು ಸಲ ತೆಂಗಿನ ಮಿಳ್ಳಿಗಳು ಉದುರಿ ಬೀಳುತ್ತವೆ. ಕಲ್ಲುಗಳು ಬರುವ ರಭಸಕ್ಕೆ ಮಂಗಗಳು ಮರದಿಂದ ಕಾಲು ಕೀಳುತ್ತವೆ’ ಎಂದು ಅವರು ಹೇಳಿದರು.

ADVERTISEMENT

ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುವ ಮಂಗಗಳ ನಿಯಂತ್ರಣಕ್ಕೆ ದೊಡ್ಡ ಕವಣೆಗೆ ಮರದ ಉದ್ದ ಕೊಂಬೆ ಬಳಸಲಾಗುತ್ತಿದೆ. ಅದನ್ನು ನೆಲಕ್ಕೆ ಊರಿಕೊಂಡು ವಯಸ್ಸಾದವರೂ ಬಳಸಬಹುದು. ಚೀಲದಲ್ಲಿ ಕಲ್ಲು ತುಂಬಿಕೊಂಡು ತೋಟ, ರಸ್ತೆಯತ್ತ ಒಂದು ಸುತ್ತು ಹಾಕಿ, ನಾಲ್ಕಾರು ಕಲ್ಲು ಹೊಡೆದರೆ ಮಂಗಗಳು ಹೆದರಿ ಓಡುತ್ತವೆ. ಊರಿನ 25ಕ್ಕೂ ಹೆಚ್ಚು ರೈತರು ಏರ್‌ಗನ್ ಬಿಟ್ಟು ದೊಡ್ಡ ಕವಣೆ ತಯಾರಿಸಿಕೊಂಡು ಮಂಗಗಳ ಕಾಟ ನಿಯಂತ್ರಿಸುತ್ತಿದ್ದಾರೆ.

‘ಏರ್‌ಗನ್ ಗುಂಡು ಖಾಲಿಯಾದರೆ ಒಮ್ಮೊಮ್ಮೆ ಪೇಟೆಯಲ್ಲಿ ಸಿಗುವುದಿಲ್ಲ. ಒಂದೊಂದು ಏರ್‌ಗನ್‌ಗೆ ಒಂದೊಂದು ಅಳತೆಯ ಗುಂಡುಗಳು ಬೇಕಾಗುವುದರಿಂದ ಅವೆಲ್ಲ ಕಿರಿಕಿರಿಯಾಗುತ್ತವೆ. ದೊಡ್ಡ ಕವಣೆಯನ್ನು ₹ 100ರ ಒಳಗೆ ನಾವೇ ತಯಾರಿಸಬಹುದು. ಅದಕ್ಕ ಬೇಕಾಗುವ ರಬ್ಬರ್ ಅನ್ನು ಮಾತ್ರ ಪೇಟೆಯಿಂದ ತಂದರಾಯಿತು. ಯಾವುದೇ ಗಟ್ಟಿ ಜಾತಿ ಗಿಡದ ಕವಲು ಕೊಂಬೆಯನ್ನು ಬಳಕೆ ಮಾಡಬಹುದು. ಅದಕ್ಕೆ ರಬ್ಬರ್ ಕಟ್ಟಿ ಕಲ್ಲನ್ನು ಸಿಕ್ಕಿಸಿ ಎಳೆದು ಬಿಟ್ಟರೆ ಮರದ ಮೇಲಿರುವ ಮಂಗಗಳು ಓಡುತ್ತವೆ’ ಎಂದು ಕೃಷಿಕರು ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.