ADVERTISEMENT

ಶಿರಸಿ: ವಿದ್ಯುತ್ ಖಾಸಗೀಕರಣ ಕೈಬಿಡಲು ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 3:32 IST
Last Updated 11 ಆಗಸ್ಟ್ 2021, 3:32 IST
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರಿಗೆ ಮನವಿ ಸಲ್ಲಿಸಲಾಯಿತು
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರಿಗೆ ಮನವಿ ಸಲ್ಲಿಸಲಾಯಿತು   

ಶಿರಸಿ: ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವುದೂ ಸೇರಿದಂತೆ ಹಲವು ಸಮಸ್ಯೆಗೆ ಕಾರಣವಾಗುವ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಹೊತ್ತು ಸಂಘಟನೆಯ ಕಾರ್ಯಕರ್ತರು ಸಾಂಕೇತಿಕ ಧರಣಿ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ‘ಕೃಷಿ ಪಂಪ್‍ಸೆಟ್‍‍ಗಳಿಗೆ ಪ್ರಿಪೇಯ್ಡ್ ಮೀಟರ್ ಅಳವಡಿಸುವ ಸರ್ಕಾರದ ನಿರ್ಧಾರ ಮೂರ್ಖತನದ್ದು. ಇದು ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣ ಮಾಡುವ ವ್ಯವಸ್ಥಿತ ಹುನ್ನಾರ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರ ಸಂಕಷ್ಟದಲ್ಲಿರುವ ರೈತರ ಕುರಿತು ಚಿಂತನೆ ಮಾಡಲಿ. ನೆರೆಯಿಂದ ಹಾಳಾದ ಬೆಳೆಗೆ ಮೌಲ್ಯಯುತ ಪರಿಹಾರ ನೀಡಬೇಕು. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಮೊತ್ತ ₹5 ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಅರಣ್ಯ ಸಾಗುವಳಿದಾರರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಪ್ರಮುಖರಾದ ಪ್ರಮೋದ ಜಕಲಣ್ಣನವರ್, ನಾಗರಾಜ ಢಾಂಘೆ, ಜಾಕೀರ್ ಹುಸೇನ್, ನವೀನ ಜಡೇದರ, ಜಗನ್ನಾಥ ಬದ್ದಿ, ದೀಪಕ ಶೇಟ್, ಗಣೇಶ ನಾಯ್ಕ, ಜಿ.ಟಿ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.