ADVERTISEMENT

ಕುಮಟಾ: ಬಾಂಧವ್ಯ ಬೆಸೆಯುವ ಬೊಗರಿಬೈಲ್ ‘ಗಡಿ ಹಬ್ಬ’

ಬಾಯಲ್ಲಿ ನೀರೂರಿಸುವ ಹಂಚಿನ ರೊಟ್ಟಿ, ನಾಟಿ ಕೋಳಿ ಸಾರು

ಎಂ.ಜಿ.ನಾಯ್ಕ
Published 2 ಮೇ 2025, 4:15 IST
Last Updated 2 ಮೇ 2025, 4:15 IST
ಕುಮಟಾ ತಾಲ್ಲೂಕಿನ ಬೊಗರಿಬೈಲ ಗ್ರಾಮದ ಮನೆಯೊಂದರಲ್ಲಿ `ಗಡಿ ಹಬ್ಬ’ಕ್ಕಾಗಿ ನಾಟಿ ಕೋಳಿ ಸಾರಿಗೆ ಹಂಚು ರೊಟ್ಟಿ ತಯಾರಿಸಲಾಯಿತು
ಕುಮಟಾ ತಾಲ್ಲೂಕಿನ ಬೊಗರಿಬೈಲ ಗ್ರಾಮದ ಮನೆಯೊಂದರಲ್ಲಿ `ಗಡಿ ಹಬ್ಬ’ಕ್ಕಾಗಿ ನಾಟಿ ಕೋಳಿ ಸಾರಿಗೆ ಹಂಚು ರೊಟ್ಟಿ ತಯಾರಿಸಲಾಯಿತು   

ಕುಮಟಾ: ಬಿರು ಬೇಸಿಗೆಯಲ್ಲಿ ಹತ್ತಾರು ಜನರನ್ನು ಒಗ್ಗೂಡುವಂತೆ ಮಾಡುವ ‘ಗಡಿ ಹಬ್ಬ’ ಸಂಭ್ರಮದ ವಾತಾವರಣ ಸೃಷ್ಟಿಸುತ್ತದೆ. ಅಘನಾಶಿನಿ ನದಿ ತಟದಲ್ಲಿರುವ ತಾಲ್ಲೂಕಿನ ಬೊಗರಿಬೈಲ್ ಗ್ರಾಮದ ವಿಶೇಷ ಆಚರಣೆ ಗಮನ ಸೆಳೆಯುತ್ತದೆ.

ಹಬ್ಬದ ಅಂಗವಾಗಿ ಹಗಲು ಹೊತ್ತು ಗ್ರಾಮದ ಜಟಕ, ಬೇಟೆ ದೇವರ ಪೂಜೆ ಮಾಡಲಾಗುತ್ತದೆ. ಸಂಜೆ ಪ್ರತೀ ಮನೆಯಲ್ಲಿ ವಿಶೇಷವಾಗಿ ತಯಾರಿಸುವ ನಾಟಿ ಕೋಳಿ ಸಾರು, ಕೆಂಡದಲ್ಲಿ ಸುಡುವ ಅಕ್ಕಿಯ ಹಂಚು ರೊಟ್ಟಿ ವಿಶೇಷವಾಗಿರುತ್ತದೆ. ವಿಶೇಷ ಆಹಾರ ಸೇವನೆಗಾಗಿ ಗ್ರಾಮದಲ್ಲಿರುವ ಮನೆಗಳಿಗೆ ಸಂಬಧಿಕರು, ಸ್ನೇಹಿತರು ಗುಂಪುಗುಂಪಾಗಿ ಬರುತ್ತಾರೆ.

ಹಬ್ಬದ ದಿನ ಸಂಜೆ ಗ್ರಾಮದ ಪ್ರತಿ ಮನೆಯ ಅಂಗಳದಲ್ಲಿ ತಾತ್ಕಾಲಿಕ ಒಲೆ ನಿರ್ಮಿಸಿಕೊಂಡು, ಮಹಿಳೆಯರೆಲ್ಲ ಒಟ್ಟಾಗಿ ಸೇರಿ ರೊಟ್ಟಿ ತಯಾರಿಸಿದರೆ, ಪುರುಷರೆಲ್ಲ ಹರಟುತ್ತ ವಿಶೇಷ ಊಟ ಮೆಲ್ಲುವುದು ವಾಡಿಕೆ. ಬೇಸಿಗೆಯಲ್ಲಿ ಮದುವೆ ಸಮಾರಂಭ ಹೊರತುಪಡಿಸಿದರೆ ಬೇರೆ ಹಬ್ಬಗಳಿಲ್ಲದ ಕಾರಣ ಗಡಿಹಬ್ಬ ಜನರನ್ನು ಸೇರಿಸಲು ವೇದಿಕೆಯಾಗುತ್ತಿದೆ.

ADVERTISEMENT

‘ಏಪ್ರಿಲ್, ಮೇ ತಿಂಗಳಲ್ಲಿ ಗಡಿ ಹಬ್ಬ ಬರುವುದರಿಂದ ಸೆಖೆ ತಡೆಯಲಾರದೆ ಮನೆಯ ಹೊರ ಅಂಗಳಲ್ಲಿ ರೊಟ್ಟಿ ತಯಾರಿಕೆಗಾಗಿಯೇ ತಾತ್ಕಾಲಿಕ ಒಲೆ ನಿರ್ಮಿಸುತ್ತಾರೆ. ನಾಲ್ವರು ಮಹಿಳೆಯರು ಬೆಂಕಿಯ ದಗೆಯನ್ನು ತಡೆದುಕೊಂಡು ಕಟ್ಟಿಗೆಯ ಒಲೆಯ ಮುಂದೆ ಕೂತು ರೊಟ್ಟಿ ತಯಾರಿಸುತ್ತಾರೆ. ತಟ್ಟಿದ ಹಿಟ್ಟನ್ನು ಮಣ್ಣಿ ಹಂಚಿನ ಮೇಲೆ ಕೊಂಚ ಬೇಯಿಸಿದ ನಂತರ ಒಲೆಯ ಬದಿಗೆ ಕೆಂಡದಲ್ಲಿ ಮತ್ತೆ ಬೇಯಿಸುತ್ತಾರೆ. ಹಾಗೆ ಬೇಯಿಸುವಾಗ ಅದು ಬಲೂನಿನಂತೆ ಉಬ್ಬುತ್ತದೆ. ಉಬ್ಬಿದ ಬಿಸಿ ರೊಟ್ಟಿಯನ್ನು ನೇರವಾಗಿ ಮನೆಗೆ ಬಂದ ಅತಿಥಿಗಳಿಗೆ ಬಡಿಸುತ್ತಾರೆ. ಸಂಜೆಯ ವೇಳೆಗೆ ಆರಂಭವಾಗುವ ಊಟದ ಸಮಾರಾಧನೆ ತಡರಾತ್ರಿವರೆಗೂ ಸಾಗುತ್ತದೆ’ ಎನ್ನುತ್ತಾರೆ ಗ್ರಾಮದ ಹಿರಿಯ ನಾರಾಯಣ ನಾಯ್ಕ.

‘ಹಿಂದೆ ಬಂಧುಗಳನ್ನು, ಆತ್ಮೀಯರನ್ನು ಮನೆಗೆ ಕರೆದು ಸತ್ಕರಿಸಲು ಗ್ರಾಮದ ಗಡಿ ಹಬ್ಬ ಒಂದು ನೆಪವಾಗಿತ್ತು. ಗಡಿ ಹಬ್ಬಕ್ಕೆ ಕರೆಯದಿದ್ದರೆ ಎಷ್ಟೋ ಜನರು ಬೇಸರ ಮಾಡಿಕೊಳುವುದೂ ಇದೆ. ಈಗ ಗ್ರಾಮದಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡುವವರು ಕಡಿಮೆಯಾಗಿದ್ದಾರೆ. ಗಡಿ ಹಬ್ಬ ಬಂತು ಎಂದರೆ ಬೇರೆ ಊರುಗಳಿಗೆ ಹೋಗಿ ನಾಟಿ ಕೋಳಿ ಹುಡುಕಿ ತರುವುದೇ ಸಮಸ್ಯೆ’ ಎಂದರು.

ಏಪ್ರಿಲ್, ಮೇ ತಿಂಗಳಲ್ಲಿ ಆಚರಣೆ ಅಘನಾಶಿನಿ ನದಿ ತಟದಲ್ಲಿ ಹಬ್ಬದ ಸಂಭ್ರಮ ನಾಟಿ ಕೋಳಿ ಹುಡುಕಾಟವೇ ಸವಾಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.