ADVERTISEMENT

ತೀರ್ಥ, ಪ್ರಸಾದ ವಿತರಣೆ ವಿಚಾರ: ಉಪಾಧಿವಂತರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 9 ಮೇ 2024, 14:07 IST
Last Updated 9 ಮೇ 2024, 14:07 IST
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.  
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.     

ಗೋಕರ್ಣ: ಇಲ್ಲಿಯ ಮಹಾಬಲೇಶ್ವರ ದೇವಸ್ಥಾನದಲ್ಲಿ ನಂದಿಯ ಹಿಂದೆ ತೀರ್ಥ, ಪ್ರಸಾದ ಕೊಡುವ ಹಕ್ಕಿಗೆ ಸಂಬಂಧ ಪಟ್ಟಂತೆ ಎರಡು ಉಪಾಧಿವಂತ ಮನೆತನದ ನಡುವೆ ಗುರುವಾರ ವಿವಾದ ಉಂಟಾಗಿದ್ದು, ದೇವಾಲಯದಲ್ಲಿಯೇ ಎರಡೂ ಕಡೆಯವರ ನಡುವೆ ವಾಗ್ವಾದ ನಡೆಯಿತು.

ಅನೇಕ ವರ್ಷಗಳಿಂದ ದೇವಸ್ಥಾನದಲ್ಲಿ ತೀರ್ಥ, ಪ್ರಸಾದ ನೀಡುವ ಜವಾಬ್ದಾರಿಯನ್ನು ಜಂಭೆ ಮತ್ತು ಗೋಪಿ ಮನೆತನದವರು ನಿಭಾಯಿಸುತ್ತ ಬಂದಿದ್ದರು. ವರ್ಷದ ಆರು ತಿಂಗಳು ಗೋಪಿ ಮನೆತನ ಮತ್ತು ಉಳಿದ ಆರು ತಿಂಗಳು ಜಂಭೆ ಮನೆತನಕ್ಕೆ ಜವಾಬ್ದಾರಿ ಹಂಚಿಕೆ ಮಾಡಲಾಗಿತ್ತು. ಆದರೆ, ರಾಮಚಂದ್ರಾಪುರ ಮಠ ದೇವಸ್ಥಾನದ ಆಡಳಿತ ನಿರ್ವಹಣೆ ಮಾಡುತ್ತಿದ್ದ ಅವಧಿಯಲ್ಲಿ ಗೋಪಿ ಮನೆತನಕ್ಕೆ ನೀಡಿದ್ದ ಜವಾಬ್ದಾರಿ ಹಿಂಪಡೆದಿತ್ತು.

ಈಗ ದೇವಸ್ಥಾನದ ಆಡಳಿತ ರಾಮಚಂದ್ರಾಪುರ ಮಠದಿಂದ ತಪ್ಪಿದ್ದು, ಸುಪ್ರೀಂ ಕೋರ್ಟ್ ನೇಮಿಸಿದ ಮೇಲುಸ್ತುವಾರಿ ಸಮಿತಿಯ ಸುಪರ್ದಿಯಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ಸಹ 2008ರ ಪೂರ್ವದಲ್ಲಿದ್ದ ಪದ್ದತಿಯನ್ನು ಜಾರಿಗೆ ತರುವಂತೆಯೂ ಸಮಿತಿಗೆ ತಿಳಿಸಿತ್ತು. ಹೀಗಾಗಿ ಗೋಪಿ ಮನೆತನದವರು ತಮ್ಮ ಹಕ್ಕನ್ನು ಚಲಾಯಿಸಲು ಗುರುವಾರ ಪ್ರಯತ್ನ ಪಟ್ಟಾಗ, ಜಂಭೆ ಮನೆತನದವರು ಅವಕಾಶ ನಿರಾಕರಿಸಿದರು. ಇದರಿಂದ ಗದ್ದಲ ಉಂಟಾಗಿ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿತ್ತು.

ADVERTISEMENT

ಎರಡೂ ಕುಟುಂಬಗಳ ವಾದ ಆಲಿಸಿದ ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಒಂದು ವಾರದಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ಜಂಭೆ ಮನೆತನದವರಿಗೆ ಸೂಚಿಸಿದ್ದಾರೆ. ಶೀಘ್ರವೇ ಗೊಂದಲ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.