ADVERTISEMENT

ಉತ್ತರ ಕನ್ನಡ | ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ

ಬೇಸಿಗೆ ಸಮೀಪಿಸಿದ ಹಿನ್ನೆಲೆ: ಅರಣ್ಯ ಇಲಾಖೆಯಿಂದ ಮುಂಜಾಗ್ರತಾ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 15:54 IST
Last Updated 13 ಫೆಬ್ರುವರಿ 2023, 15:54 IST
ಶಿರಸಿಯ ಅರಣ್ಯ ಪ್ರದೇಶದ ಹೊರವಲಯದಲ್ಲಿ ಅರಣ್ಯ ಇಲಾಖೆ ವತಿಯಿಂದ ಬೆಂಕಿರೇಖೆ ನಿರ್ಮಿಸುತ್ತಿರುವುದು
ಶಿರಸಿಯ ಅರಣ್ಯ ಪ್ರದೇಶದ ಹೊರವಲಯದಲ್ಲಿ ಅರಣ್ಯ ಇಲಾಖೆ ವತಿಯಿಂದ ಬೆಂಕಿರೇಖೆ ನಿರ್ಮಿಸುತ್ತಿರುವುದು   

ಶಿರಸಿ: ಈಚೆಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೆಂಕಿ ಅನಾಹುತದಿಂದ ಅರಣ್ಯ ಪ್ರದೇಶ ರಕ್ಷಿಸಲು ಅರಣ್ಯ ಇಲಾಖೆ ಬೆಂಕಿರೇಖೆ ನಿರ್ಮಿಸಿ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ.

ಅರಣ್ಯ ವೀಕ್ಷಕರ ಮೂಲಕ ಬೆಂಕಿರೇಖೆ ರಚಿಸಲಾಗುತ್ತಿದೆ. ಅಗ್ನಿ ಎಚ್ಚರಿಕೆ (ಫೈರ್ ಅಲರ್ಟ್) ತಂತ್ರಜ್ಞಾನದ ಮೂಲಕ ಈ ಹಿಂದಿನ ದಾಖಲೆಗಳ ಪರಿಶೀಲಿಸಿ ಅಗತ್ಯ ಸ್ಥಳಗಳಲ್ಲಿ ಜೆಸಿಬಿ ಬಳಸಿಯೂ ಬೆಂಕಿರೇಖೆ ರಚಿಸಲಾಗುತ್ತಿದೆ. ಬೆಂಕಿ ತಗಲುವ ಸಾಧ್ಯತೆ ಇರುವ ಕಡೆ ಒಣಗಿಡಗಳನ್ನು ತೆರವುಗೊಳಿಸಿ ಇಂತಹ ರೇಖೆ ನಿರ್ಮಿಸಲಾಗುತ್ತಿದೆ.

‘ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಾಡ್ಗಿಚ್ಚಿನ ಪ್ರಕರಣ ಹೆಚ್ಚಿದೆ. ಈಗಾಗಲೇ ವಿವಿಧ ತಾಲ್ಲೂಕುಗಳಲ್ಲಿ 45ಕ್ಕಿಂತ ಹೆಚ್ಚು ಕಡೆ ಬೆಂಕಿ ಪ್ರಕರಣಗಳು ದಾಖಲಾಗಿವೆ. ಈ ಬಾರಿ ಬಿಸಿಲಿನ ಝಳವೂ ಹೆಚ್ಚುತ್ತಿದ್ದು ಬೆಂಕಿ ಅವಘಡಗಳಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ. ಹೀಗಾಗಿ ಬೆಂಕಿ ರೇಖೆಗಳನ್ನು ಪದೇ ಪದೇ ಪರಿಶೀಲಿಸಲಾಗುತ್ತಿದೆ’ ಎನ್ನುತ್ತಾರೆ ಡಿಸಿಎಫ್ ಜಿ.ಆರ್.ಅಜ್ಜಯ್ಯ.

ADVERTISEMENT

‘ಅರಣ್ಯ ಪ್ರದೇಶದಲ್ಲಿ ಚಿಕ್ಕದಾಗಿ ಕಾಣುವ ಬೆಂಕಿ ವ್ಯಾಪಕವಾಗಿ ಹಬ್ಬಿ ಇಡೀ ಕಾಡನ್ನು ಸುಡುವ ಅಪಾಯವಿರುತ್ತದೆ. ಇದಕ್ಕಾಗಿ ಬೇಸಿಗೆ ಆರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. 50ಕ್ಕೂ ಹೆಚ್ಚು ವೀಕ್ಷಕರ ಸಂಖ್ಯೆ ಹೆಚ್ಚಿಸಲಾಗಿದೆ. ಅರಣ್ಯದ ಸುತ್ತಮುತ್ತಲಿನ ದಾರಿಗಳ ಸ್ವಚ್ಛತೆ ಮಾಡಲಾಗಿದೆ’ ಎಂದರು.

ಅರಣ್ಯಕ್ಕೆ ಪ್ಲಾಸ್ಟಿಕ್‌ ಕಂಟಕ:

‘ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಸಂದರ್ಭ ಅಥವಾ ಆಕಸ್ಮಿಕವಾಗಿ ಹತ್ತುವ ಬೆಂಕಿ ಹೆಚ್ಚಾಗಿ ಹರಡಲು ಪ್ಲಾಸ್ಟಿಕ್‌ ಕಾರಣವಾಗುತ್ತದೆ. ಬೆಟ್ಟ, ಅರಣ್ಯ ಭಾಗಗಳಿಗೆ ಟ್ರೆಕ್ಕಿಂಗ್‌ ಸಲುವಾಗಿ ತೆರಳುವ ಪ್ರವಾಸಿಗರು ತಾವು ಕೊಂಡೊಯ್ದ ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಕವರ್‌ ಗಳನ್ನು ಅಲ್ಲಲ್ಲಿ ಎಸೆಯುವುದರಿಂದ ಕಾಡಿಗೆ ಬೆಂಕಿ ಬಿದ್ದ ಸಮಯದಲ್ಲಿ ಹೆಚ್ಚು ಹೊತ್ತು ಉರಿಯುವುದರಿಂದ ಬೆಂಕಿ ಆರಿಸಲು ತಡವಾಗುವಂತೆ ಮಾಡುತ್ತದೆ. ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸಬೇಕು’ ಎನ್ನುತ್ತಾರೆ ಪರಿಸರ ವಾದಿಯೊಬ್ಬರು.

***

ಬೆಂಕಿ ಆರಿಸಲು ಸಿಬ್ಬಂದಿ ನೇಮಿಸಲಾಗಿದೆ. ಕಾಡ್ಗಿಚ್ಚು ತಡೆಗೆ ಬೆಂಕಿರೇಖೆಗಳ ನಿರ್ಮಾಣ ಮಾಡಲಾಗುತ್ತಿದ್ದು ಹೆಚ್ಚಿನ ಹಾನಿ ತಡೆಗೆ ಈ ವ್ಯವಸ್ಥೆ ಅನುಕೂಲವಾಗಿದೆ.

– ಜಿ.ಆರ್.ಅಜ್ಜಯ್ಯ, ಡಿ.ಸಿ.ಎಫ್. ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.