ಯಲ್ಲಾಪುರ: ಮುಂಡಗೋಡದ ವ್ಯಕ್ತಿಯೊಬ್ಬರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ದುಷ್ಕರ್ಮಿಗಳು, ಪೊಲೀಸರ ಮೇಲೆ ದಾಳಿ ನಡೆಸಿದ್ದರಿಂದ ಇಬ್ಬರ ಕಾಲಿಗೆ ಗುಂಡು ಹಾರಿಸಿ ಅವರನ್ನು ಸೇರಿ ಐವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
‘ಜಮೀರ ಅಹ್ಮದ್ ದುರ್ಗಾವಾಲೆ ಎಂಬುವರನ್ನು ಅಪಹರಣ ನಡೆಸಿದ್ದ ಆರೋಪಿಗಳಾದ ರಹೀಮ್ ಜಾಫರ ಸಾಬ ಹಾಗೂ ಅಜಯ ಫಕೀರಪ್ಪನನ್ನು ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಕೊಲೆ ಪ್ರಕರಣದಲ್ಲಿ ಈ ಹಿಂದೆ ಜೈಲು ಸೇರಿದ್ದರು’ ಎಂದು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಅಪಹರಣಕಾರರು ವ್ಯಕ್ತಿಯ ಕುಟುಂಬದಿಂದ ₹30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಕರಣದಲ್ಲಿ ಭಾಗಿಯಾದವರ ಪೈಕಿ ಶುಕ್ರವಾರ ನಾಲ್ವರನ್ನು ಬಂಧಿಸಲಾಗಿತ್ತು. ಇನ್ನಷ್ಟು ಆರೋಪಿಗಳಿರುವ ಮಾಹಿತಿ ಹಿನ್ನಲೆಯಲ್ಲಿ ಮುಂಡಗೋಡು ಪೊಲೀಸರು ಕಲಘಟಗಿಯಿಂದ ದುಷ್ಕರ್ಮಿಗಳನ್ನು ಬೆನ್ನುಹತ್ತಿದ್ದರು. ಯಲ್ಲಾಪುರ ಪೊಲೀಸರು ಡೌಗಿನಾಳದ ಬಳಿ ಆ ತಂಡದವರನ್ನು ಅಡ್ಡಗಟ್ಟಿ ಶರಣಾಗುವಂತೆ ತಾಕೀತು ಮಾಡಿದರು. ಆದರೆ ಇದಕ್ಕೆ ಒಪ್ಪದ ದುಷ್ಕರ್ಮಿಗಳು ಪೊಲೀಸರ ಕಡೆ ಕಲ್ಲು ಬೀಸಿದರು. ಚಾಕು, ಕಾರದಪುಡಿಗಳಿಂದ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಬೆದರಿಸಿದರು. ದುಷ್ಕರ್ಮಿಗಳು ಶರಣಾಗದಿದ್ದಾಗ ಪೊಲೀಸರು ಆರೋಪಿತರ ಕಾಲಿಗೆ ಗುಂಡು ಹಾರಿಸಿದರು’ ಎಂದರು.
‘ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ, ಎಸ್‌ಐ ಪರಶುರಾಮ ಹಾಗೂ ಯಲ್ಲಾಪುರ ಪೊಲೀಸ್ ಸಿಬ್ಬಂದಿ ಶಫಿ ಗಾಯಗೊಂಡಿದ್ದಾರೆ. ಆರೋಪಿಗಳು ಸಾಗುತ್ತಿದ್ದ ಕಾರಿನಲ್ಲಿದ್ದ ಚಾಲಕ ದಾದಾಫೀರ್ ಅಲ್ಲಾಭಕ್ಷ, ಸಾಗರ ಕಲಾಲ ಹಾಗೂ ಹಾಸೀಂ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ, ಡಿವೈಎಸ್‌ಪಿಗಳಾದ ಗಣೇಶ ಕೆ.ಎಲ್, ಶಿವಾನಂದ, ಸಿಪಿಐ ರಮೇಶ ಹಾನಾಪುರ, ಜಯಪಾಲ ಪಾಟೀಲ, ಎಸ್‌ಐ ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.