ADVERTISEMENT

ಕಾರವಾರ | ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಕ್ಕೆ ಒತ್ತಾಯ–ಡಿಸಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 7:10 IST
Last Updated 24 ಜೂನ್ 2019, 7:10 IST
   

ಕಾರವಾರ:ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೀನು ಮಾರುಕಟ್ಟೆ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯಗೊಳಿಸಬೇಕು. ಅಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.

ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕರಾದ ಕಾಂಗ್ರೆಸ್ ನ ಸತೀಶ ಸೈಲ್ ಮತ್ತು ಜೆಡಿಎಸ್ ನ ಆನಂದ ಅಸ್ನೋಟಿಕರ್ ಕೂಡ ಜೊತೆಯಾದರು.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ಸೂಕ್ತ ಸೌಕರ್ಯಗಳಿಲ್ಲ. ಬೀಸಿಗೆಯಲ್ಲಿ ಸುಡು ಬಿಸಿಲಿನಲ್ಲಿ, ಈಗ ಮಳೆಗಾಲದಲ್ಲಿ ಮಳೆಯ ನಡುವೆ ಕೊಡೆ ಹಿಡದುಕೊಂಡು ಮೀನು ಮಾರಾಟ ಮಾಡುವಂತಾಗಿದೆ. ಈ ಸಮಸ್ಯೆ ಬಗೆಹರಿಸುವುದಾಗಿ ನಗರಸಭೆ ನೀಡಿದ್ದ ಭರವಸೆಯೂ ಈಡೇರಿಲ್ಲ ಎಂದು ಮೀನುಗಾರರು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ ಮನವಿ ಸ್ವೀಕರಿಸಿ, 'ಮೀನು ಮಾರುಕಟ್ಟೆ ಸಂಬಂಧ ಜೂನ್ 27ರಂದು ಹೈಕೋರ್ಟ್ ನಿಂದ ಆದೇಶ ಬರುವ ನಿರೀಕ್ಷೆ ಇದೆ. ನಂತರ ಸಭೆ ನಡೆಸಿ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು' ಎಂದು ಭರವಸೆ ನೀಡಿದರು.

ಮುಖಂಡರ ವಾಗ್ವಾದ

ಪ್ರತಿಭಟನೆಯ ಸ್ಥಳದಲ್ಲಿ ಹಾಜರಿದ್ದ ಶಾಸಕಿ ರೂಪಾಲಿ ನಾಯ್ಕ ಹಾಗೂ ಕಾಂಗ್ರೆಸ್ ಮುಖಂಡ ಸತೀಶ ಸೈಲ್ ನಡುವೆ ವಾಗ್ವಾದ ನಡೆಯಿತು.

'ಮೀನು ಮಾರುಕಟ್ಟೆ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ' ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದಾಗ ಸತೀಶ ಸೈಲ್ ಆಕ್ಷೇಪಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮೀನುಗಾರರು ಜಿಲ್ಲಾಧಿಕಾರಿ ಜೊತೆ ಚರ್ಚಿಸಿದರು.

ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ರಾಜು‌ ತಾಂಡೇಲ, ಚೇತನ ಹರಿಕಂತ್ರ, ಪ್ರವೀಣ ಜಾವ್ಕರ್, ವಿನಾಯಕ ಹರಿಕಂತ್ರ ಹಾಗೂ ನೂರಾರು ಮೀನುಗಾರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.