ಕುಮಟಾ: ಪಟ್ಟಣದ ಮೀನು ಮಾರುಕಟ್ಟೆಯ ಆವರಣದ ಹೊರಗೆ ಕುಳಿತು ಮೀನು ಶುಚಿಗೊಳಿಸುವ ಮಹಿಳೆಯರಿಗೆ ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಬುಧವಾರ ಮೀನು ಮಾರುಕಟ್ಟೆಗೆ ಭೇಟಿ ಅವರನ್ನು ಮೀನು ಶುಚಿಗೊಳಿಸುವ ಮಹಿಳೆಯರು ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.
‘ಸುಮಾರು 25ಕ್ಕೂ ಹೆಚ್ಚು ಮೀನು ಶುಚಿಗೊಳಿಸುವ ಮಹಿಳೆಯರು ಮಾರುಕಟ್ಟೆಯ ಹೊರಗೆ ಕುಳಿತು ಕೆಲಸ ಮಾಡುತ್ತಿದ್ದಾರೆ. ಅವರು ಮೀನು ಶುಚಿಗೊಳಿಸಿಕೊಡುವುದರಿಂದ ಜನರಿಗೆ ಮನೆಗಳಲ್ಲಿ ಶುಚಿಗೊಳಿಸಿದ ಮೀನು ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವ ಕಷ್ಟ ತಪ್ಪುತ್ತದೆ. ಮೀನು ತ್ಯಾಜ್ಯವನ್ನು ಕೃತಕವಾಗಿ ಸಾಕುವ ಮೀನುಗಳಿಗೆ ಆಹಾರವಾಗಿಯೂ ನೀಡಲಾಗುತ್ತದೆ. ಇಂಥ ಉಪಯಕ್ತ ಕೆಲಸ ಮಾಡುವ ಮಹಿಳೆಯರು ಬೇಸಿಗೆಯಲ್ಲಿ ಹೇಗೋ ಕೆಲಸ ಮಾಡುತ್ತಾರೆ. ಮಳೆಗಾಲದಲ್ಲಿ ಮೀನು ಪ್ರಮಾಣ ಕೂಡ ಹೆಚ್ಚಿರುವುದರಿಂದ ಹೊರ ಮೈದಾನದಲ್ಲಿ ಕೊಡೆ ಹಿಡಿದು ಕುಳಿತು ಮೀನು ಶುಚಿಗೊಳಿಸುವುದು ಕಷ್ಟಕರ. ಆದ್ದರಿಂದ ₹ 5 ಲಕ್ಷ ವೆಚ್ಚದಲ್ಲಿ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದರು.
‘ಮೀನು ಮಾರುಕಟ್ಟೆಯೊಳಗೆ ಫ್ಯಾನ್‌ಗಳು ಹಾಳಾಗಿದ್ದು, ಅವುಗಳನ್ನು ತಕ್ಷಣವೇ ದುರಸ್ತಿ ಮಾಡಿಕೊಡುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದೇನೆ. ಮೀನು ಮಾರಾಟ ಮಾಡುವವರು ಹಾಗೂ ಮೀನು ಶುಚಿಗೊಳಿಸುವುವವರು ಸುತ್ತಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದೆ. ಮೀನು ಮಾರುಕಟ್ಟೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಆದರೆ ಸಾರ್ವಜನಿಕರು ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮೀನು ಮಾರುಕಟ್ಟೆಯ ಶುಚಿತ್ವ ಕಪಾಡಿಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.