ADVERTISEMENT

ಮಸೂದೆಗೆ ಮೊದಲು ಅಹವಾಲು ಆಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:31 IST
Last Updated 15 ಅಕ್ಟೋಬರ್ 2019, 18:31 IST
ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ಕಾರವಾರ: ಕೇಂದ್ರ ಮೀನುಗಾರಿಕಾ ಸಚಿವಾಲಯವು ಮೀನುಗಾರಿಕಾ ಮಸೂದೆಯನ್ನು ಮಂಡಿಸುವ ಮೊದಲು ಮೀನುಗಾರರ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶ ಕೊಡಬೇಕು. ದೈನಂದಿನ ಸಮಸ್ಯೆಗಳನ್ನು ರಾಷ್ಟ್ರೀಯ ಮೀನುಗಾರಿಕೆ ಕಾರ್ಮಿಕರ ವೇದಿಕೆಯ ಮೂಲಕ ಆಲಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘಗಳ ಒಕ್ಕೂಟ ಒತ್ತಾಯಿಸಿದೆ.

ಈ ಸಂಬಂಧ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಮೂಲಕ ಮಂಗಳವಾರ ಮನವಿ ಸಲ್ಲಿಸಲಾಯಿತು.

ಹವಾಮಾನ ವೈಪರೀತ್ಯ, ಬಂದರು, ಕಡಲಕಿನಾರೆಯ ಅಭಿವೃದ್ಧಿಯಂತಹ ಚಟುವಟಿಕೆಗಳಿಂದ ಕರಾವಳಿಯ ಮೀನುಗಾರರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭಗಳಲ್ಲಿ ಮೀನುಗಾರರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಮತ್ಸ್ಯೋದ್ಯಮವು ಕೋಟ್ಯಂತರ ರೂಪಾಯಿಗಳ ವಿದೇಶಿ ವ್ಯವಹಾರ ನಡೆಸುತ್ತಿದೆ. ಆದರೆ,ಅಭಿವೃದ್ಧಿಯ ಹೆಸರಿನಲ್ಲಿ ಜಾರಿಯಾಗುನ ನೀತಿಗಳಲ್ಲಿ ಇದು ಗಣನೆಗೇ ಬರುತ್ತಿಲ್ಲ ಎಂದು ಪತ್ರದಲ್ಲಿಆಕ್ಷೇಪವ್ಯಕ್ತಪಡಿಸಲಾಗಿದೆ.

ADVERTISEMENT

ಈ ರೀತಿಯ ಪರಿಸ್ಥಿತಿಗಳಲ್ಲಿ ಮೀನುಗಾರರು ಮತ್ತು ಅವರ ಸಂಘಟನೆಗಳು ಅನಿವಾರ್ಯವಾಗಿ ಪ್ರತಿರೋಧ ತೋರುವ ಸಂದರ್ಭಗಳು ಎದುರಾಗಿವೆ. ಉತ್ತರ ಕನ್ನಡದಲ್ಲಿ ಸೀಬರ್ಡ್ ನೌಕಾನೆಲೆಯನ್ನು ಸ್ಥಾಪಿಸುವಾಗ ಸಾವಿರಾರು ಮೀನುಗಾರ ಕುಟುಂಬಗಳನ್ನು ತೆರವು ಮಾಡಲಾಯಿತು. ಆದರೆ, ಅವರಿಗೆ ಇನ್ನೂ ಸೂಕ್ತ ನೆಲೆ ಸಿಗದೇ ದೈನಂದಿನ ಜೀವನ ನಡೆಸಲು ಪರದಾಡುತ್ತಿದ್ದಾರೆ. ನೌಕಾನೆಲೆಯ ಸಿಬ್ಬಂದಿಯಿಂದಲೂ ಸಮುದ್ರದಲ್ಲಿ ಮೀನುಗಾರರ ಮೇಲೆ ಆಗಾಗ ದಬ್ಬಾಳಿಕೆ ನಡೆಯುತ್ತಿರುತ್ತದೆ ಎಂದು ದೂರಲಾಗಿದೆ.

ಈ ಎಲ್ಲ ಕಾರಣಗಳಿಂದ ಮೀನುಗಾರಿಕೆಗೆ ಸಂಬಂಧಿಸಿದ ಹೊಸ ಮಸೂದೆಯನ್ನು ಜಾರಿ ಮಾಡುವ ಮೊದಲು ಮೀನುಗಾರ ಸಮುದಾಯಕ್ಕೆ ತನ್ನ ಅಭಿಪ್ರಾಯ ತಿಳಿಸಲು ಅವಕಾಶ ಕೊಡಬೇಕು. ಇದರಿಂದ ಮಸೂದೆಯನ್ನು ಯಾವುದೇ ಗೊಂದಲವಿಲ್ಲದೇ ಮಂಡಿಸಲು ಅವಕಾಶವಾಗುತ್ತದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮೀನುಗಾರರ ಮುಖಂಡರಾದ ಕೆ.ಟಿ.ತಾಂಡೇಲ, ಮೋಹನ, ವೆಂಕಟೇಶ ಹರಿಕಂತ್ರ, ರೋಹಿದಾಸ್, ಶ್ರೀಧರ್ ಹರಿಕಂತ್ರ, ಸುರೇಶ ಕೆ.ತಾಂಡೇಲ, ಪ್ರಶಾಂತ ಹರಿಕಂತ್ರ, ಸುಧಾಕರ ಹರಿಕಂತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.