ADVERTISEMENT

ಗೋಕರ್ಣ: ಮೀನು ಮಾರುಕಟ್ಟೆ ಉದ್ಘಾಟನೆಗೆ 15 ದಿನ ಗಡುವು

ಮಾದನಗೇರಿಯಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಿಸಲಾದ ಮೀನು ಮಾರಾಟ ಸ್ಥಳ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:37 IST
Last Updated 2 ಜುಲೈ 2021, 14:37 IST
ಗೋಕರ್ಣ ಸಮೀಪದ ಮಾದನಗೇರಿಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಮೀನು ಮಾರುಕಟ್ಟೆ.
ಗೋಕರ್ಣ ಸಮೀಪದ ಮಾದನಗೇರಿಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಮೀನು ಮಾರುಕಟ್ಟೆ.   

ಗೋಕರ್ಣ: ಕುಮಟಾ ಮತ್ತು ಅಂಕೋಲಾ ತಾಲ್ಲೂಕಿನ ಗಡಿ ಭಾಗದ ಮಾದನಗೇರಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ಸುಸಜ್ಜಿತ ಮೀನು ಮಾರುಕಟ್ಟೆ ಎರಡು ವರ್ಷವಾದರೂ ಉದ್ಘಾಟನೆಯಾಗಿಲ್ಲ. ಇದರಿಂದ ತೊಂದರೆಯಾಗಿದ್ದು, ಕೂಡಲೇ ಮಾರುಕಟ್ಟೆಯನ್ನು ಉಪಯೋಗಿಸಲು ಅವಕಾಶ ನೀಡುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

ಮೀನು ಮಾರುವ ಮಹಿಳೆಯರು ಬಿಸಿಲು ಹಾಗೂ ಮಳೆಯಲ್ಲಿ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಲಾಕ್‌ಡೌನ್ ಮುಗಿದ 15 ದಿನಗಳಲ್ಲಿ ಉದ್ಘಾಟನೆಯಾಗದಿದ್ದರೆ ಮಾರುಕಟ್ಟೆಯ ಬೀಗ ತೆಗೆದು, ಮಾರುಕಟ್ಟೆಯ ಒಳಗೆ ಕುಳಿತು ವ್ಯಾಪಾರ ಮಾಡುವುದಾಗಿ ಮೀನು ಮಾರುವ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

‘ಮೀನು ಮಾರುಕಟ್ಟೆಯ ವ್ಯಾಜ್ಯಗಳೇನೇ ಇದ್ದರು ಸಂಬಂಧಪಟ್ಟವರು ಬಗೆಹರಿಸಿ ಕೊಳ್ಳಬೇಕು. ಅದನ್ನು ಬಿಟ್ಟು ಮೀನು ಮಾರುವ ಮಹಿಳೆಯರಿಗೆ ಯಾವುದೇ ತೊಂದರೆಯಾಗಬಾರದು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಬಳಕೆಗೆ ನೀಡಬೇಕು’ ಎಂದು ತದಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಉಮಾಕಾಂತ್ ಹೊಸ್ಕಟ್ಟ, ಜಿಲ್ಲಾ ಮೀನು ಮಾರಾಟ ಒಕ್ಕೂಟದ ಸದಸ್ಯ ಮಹೇಶ್ ಮೂಡoಗಿ ಹಾಗೂ ಸ್ಥಳೀಯ ಮೀನುಗಾರು ಆಗ್ರಹಿಸಿದ್ದಾರೆ.

ADVERTISEMENT

2020ರ ನವೆಂಬರ್ ತಿಂಗಳಿನಲ್ಲಿ ಮಾದನಗೇರಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ಸುಸಜ್ಜಿತ ಕಟ್ಟಡದ ಉದ್ಘಾಟನಾ ಸಮಾರಂಭವು ಅಂಕೋಲಾ ಹಾಗೂ ಕುಮಟಾ ತಾಲ್ಲೂಕು ಅಧಿಕಾರಿಗಳ ಭಿನ್ನಾಭಿಪ್ರಾಯದಿಂದ ಡಿಢೀರನೆ ರದ್ದಾಗಿತ್ತು.

ಮೊದಲೇ ನಿಗದಿಯಾದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಉಪಸ್ಥಿತಿಯಲ್ಲಿ, ಕುಮಟಾ ಶಾಸಕ ದಿನಕರ ಶೆಟ್ಟಿ ಲೋಕಾರ್ಪಣೆಗೊಳಿಸಲಿದ್ದರು. ಆದರೆ, ಮೀನು ಮಾರುಕಟ್ಟೆಯ ಸ್ಥಳ ಅಂಕೋಲಾ ತಾಲ್ಲೂಕಿಗೆ ಸೇರಲಿದ್ದು, ಅಲ್ಲಿಯ ಶಾಸಕಿ ರೂಪಾಲಿ ನಾಯಕ ಉದ್ಘಾಟಿಸಬೇಕು ಎಂದು ಅಂಕೋಲಾ ತಾಲ್ಲೂಕು ಆಡಳಿತ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಉದ್ಘಾಟನೆಗೆ ಬಂದಿದ್ದ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸದೇ ತಿರುಗಿ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.