ADVERTISEMENT

ಅಂಕೋಲಾ: ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:41 IST
Last Updated 23 ಜುಲೈ 2025, 2:41 IST
ಕೇಣೀಯಲ್ಲಿ ನಿರ್ಮಾಣಗೊಳ್ಳಲಿರುವ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಬರೆದ ಪತ್ರವನ್ನು ಮೀನು ಮಾರುವ ಬುಟ್ಟಿಯಲ್ಲಿಟ್ಟು ಅಂಕೋಲಾದಲ್ಲಿ ತಹಶೀಲ್ದಾರ್ ಚಿಕ್ಕಪ್ಪ ನಾಯಕ ಅವರಿಗೆ ಸಲ್ಲಿಸಲಾಯಿತು.
ಕೇಣೀಯಲ್ಲಿ ನಿರ್ಮಾಣಗೊಳ್ಳಲಿರುವ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಬರೆದ ಪತ್ರವನ್ನು ಮೀನು ಮಾರುವ ಬುಟ್ಟಿಯಲ್ಲಿಟ್ಟು ಅಂಕೋಲಾದಲ್ಲಿ ತಹಶೀಲ್ದಾರ್ ಚಿಕ್ಕಪ್ಪ ನಾಯಕ ಅವರಿಗೆ ಸಲ್ಲಿಸಲಾಯಿತು.   

ಅಂಕೋಲಾ: ತಾಲ್ಲೂಕಿನ ಕೇಣಿಯಲ್ಲಿ ನಿರ್ಮಾಣಗೊಳ್ಳಲಿರುವ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಮೀನುಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೇಣಿ ಗ್ರಾಮದಿಂದ ಪಟ್ಟಣದ ತಹಶೀಲ್ದಾರ್ ಕಚೇರಿವರೆಗೆ ನೂರಾರು ಸಂಖ್ಯೆಯಲ್ಲಿದ್ದ ಜನರು ಮೆರವಣಿಗೆ ಮೂಲಕ ಸಾಗಿಬಂದರು.

ಬಂದರು ಯೋಜನೆ ವಿರೋಧಿಸಿ ಘೋಷಣೆ ಕೂಗುವ ಜೊತೆಗೆ ಯೋಜನೆ ವಿರುದ್ಧದ ಬರಹಗಳನ್ನು ಒಳಗೊಂಡ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು. ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮೀನುಗಾರರು ಬರೆದ ಪತ್ರಗಳನ್ನು ತಹಶೀಲ್ದಾರ್ ಚಿಕ್ಕಪ್ಪ ನಾಯಕ ಅವರಿಗೆ ಮೀನಿನ ಬುಟ್ಟಿಯಲ್ಲಿಟ್ಟು ನೀಡಿದರು.

ಭಾವಿಕೇರಿ, ಕೇಣಿ, ಬಡಗೇರಿ, ಬೆಲೇಕೇರಿ ಸೇರಿದಂತೆ ತಾಲ್ಲೂಕಿನ ಮೀನುಗಾರ ಸಮುದಾಯ ಹಾಗೂ ಇತರೆ ಸುಮುದಾಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಮುಖ್ಯ ರಸ್ತೆಗಳ ಮೂಲಕ ಮೆರವಣಿಗೆ ಸಾಗಿ ಬಂದಿತ್ತು.

ADVERTISEMENT

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಮಾತನಾಡಿ, ‘ಜಿಲ್ಲೆಯ ಕರಾವಳಿ ತಾಲ್ಲೂಕುಗಳಲ್ಲಿ ಅನೇಕ ಬಂದರುಗಳಿವೆ. ಕಾರವಾರದ ವಾಣಿಜ್ಯ ಬಂದರು ಖಾಲಿಯೇ ಇದೇ. ಅದನ್ನು ಬಳಸಿಕೊಳ್ಳುವ ಬದಲು ಹೊಸ ಬಂದರು ನಿರ್ಮಿಸಲು ಮುಂದಾಗಿರವುದು ಸರಿಯಲ್ಲ. ಬಂದರು ನಿರ್ಮಾಣದಿಂದ ಮೀನುಗಾರರು ಮನೆಗಳನ್ನು ಕಳೆದುಕೊಳ್ಳುವ ಜೊತೆಗೆ ಮೀನುಗಾರಿಕೆ ನಡೆಸಲು ಜಾಗವಿಲ್ಲದೆ ಕಷ್ಟಕ್ಕೆ ತುತ್ತಾಗಲಿದ್ದಾರೆ’ ಎಂದರು.

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮಾತನಾಡಿ, ‘ಕಡಲತೀರದಲ್ಲಿ ಸಾಂಪ್ರದಾಯಿಕ ನೆಲೆ ಹೊಂದಿರವ ಮೀನುಗಾರರಿಗೆ ಬೇರೆಲ್ಲೂ ಜಮೀನು, ಜಾಗಗಳಿಲ್ಲ. ಜೆಎಸ್‌ಡಬ್ಲ್ಯೂ ಕಂಪನಿಯವರು ಸ್ಥಳೀಯರನ್ನು ಉದ್ದಾರ ಮಾಡುವ ಬದಲಿಗೆ ಬಡವರ ಜೀವನವನ್ನು ಕಸಿಯಲು ಬಂದಿದ್ದಾರೆ’ ಎಂದರು.

ಸಂಜೀವ ಬಲೇಗಾರ, ರಾಜೇಂದ್ರ ನಾಯ್ಕ, ಭಾಸ್ಕರ ನಾರ್ವೆಕರ್, ಶ್ರೀಕಾಂತ್ ದುರ್ಗೇಕರ್, ರಾಜು ಕಣಗಿಲ, ಇತರರು ಪಾಲ್ಗೊಂಡಿದ್ದರು.

ಕೇಣಿ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಅಂಕೋಲಾ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮೀನುಗಾರರೊಂದಿಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಇತರ ಮುಖಂಡರು ಹೆಜ್ಜೆ ಹಾಕಿದರು.

ಕಾರಿನಿಂದ ಇಳಿಯದ ಸಚಿವ ಶಾಸಕ: ಆಕ್ರೋಶ

ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬಂದರು ಯೋಜನೆ ವಿರೋಧಿಸಿ ಮೀನುಗಾರರು ವಂದಿಗೆ ಸಮೀಪ ಮನವಿ ಸಲ್ಲಿಸಿದರು. ಸಚಿವರು ಸಾಗುತ್ತಿದ್ದ ಕಾರಿನಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಾಸಕ ಸತೀಶ ಸೈಲ್ ಇದ್ದರು. ಆದರೆ ಮೀನುಗಾರರ ಅಹವಾಲು ಆಲಿಸಲು ಬರದೆ ಕಾರಿನಲ್ಲಿಯೇ ಕುಳಿತಿದ್ದರು. ಇದನ್ನು ಕಂಡ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರವಾರದಲ್ಲೂ ಪ್ರತಿಭಟನೆ

ಕಾರವಾರ: ಕೇಣಿ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಇಲ್ಲಿನ ಮೀನು ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಳಿಸಿ ಮೀನುಗಾರ ಮಹಿಳೆಯರು ಪ್ರತಿಭಟನೆ ನಡೆಸಿದರು. ‘ನೂರಾರು ಮೀನುಗಾರ ಕುಟುಂಬಗಳನ್ನು ಬೀದಿಗೆ ತಳ್ಳುವ ಯೋಜನೆಯನ್ನು ಒತ್ತಡ ಹೇರಿ ಜಾರಿಗೆ ತರಲು ಸರ್ಕಾರ ಹೊರಟಿದೆ. ಯೋಜನೆಗೆ ಒಕ್ಕಲೆಬ್ಬಿಸಿದರೆ ಮೀನುಗಾರರು ನೆಲೆ ಕಂಡುಕೊಳ್ಳಲು ಪರ್ಯಾಯ ಸ್ಥಳವಿಲ್ಲ. ಒಗ್ಗಟ್ಟಾಗಿ ಯೋಜನೆ ವಿರೋಧಿಸುತ್ತೇವೆ’ ಎಂದು ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ ಹೇಳಿದರು. ನಗರಸಭೆ ಸದಸ್ಯರಾದ ಸ್ನೇಹಲ್ ಹರಿಕಂತ್ರ ಸುವಿಧಾ ಉಳ್ವೇಕರ್ ರೇಷ್ಮಾ ಮಾಳ್ಸೇಕರ್ ಚೇತನ್ ಹರಿಕಂತ್ರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.