ADVERTISEMENT

ಕಾರವಾರ: ಆಳಸಮುದ್ರ ದೋಣಿ ಖರೀದಿಗೆ ನಿರುತ್ಸಾಹ

ಕಳೆದ ಸಾಲಿನ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಯೋಜನೆ; ನಿಯಮ ತಿದ್ದುಪಡಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 0:30 IST
Last Updated 2 ಫೆಬ್ರುವರಿ 2023, 0:30 IST
   

ಕಾರವಾರ: ಮತ್ಸ್ಯ ಸಂಪದ ಯೋಜನೆಗೆ ಈ ಬಾರಿಯೂ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ಘೋಷಿಸಿದೆ. ಇದೇ ಯೋಜನೆಯ ಅನುದಾನ ಬಳಸಿ ರಾಜ್ಯ ಸರ್ಕಾರ ಆಳಸಮುದ್ರ ದೋಣಿ ಖರೀದಿಗೆ ರೂಪಿಸಿದ್ದ ಯೋಜನೆ ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಬಂದಿಲ್ಲ.

ಸರ್ಕಾರ ಸೂಚಿಸಿದ ದೋಣಿಗಳ ಖರೀದಿಗೆ ಇಲ್ಲಿನ ಮೀನುಗಾರರು ಒಪ್ಪದಿರುವುದು ಯೋಜನೆಯ ಹಿನ್ನೆಗೆ ಕಾರಣವಾಗಿದೆ. ಮೀನುಗಾರರ ಬೇಡಿಕೆಗೆ ತಕ್ಕ ದೋಣಿ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಒಪ್ಪದ ಕಾರಣ ಯೋಜನೆ ಘೋಷಣೆಗೆ ಸೀಮಿತವಾಗಿಯೇ ಉಳಿದುಕೊಂಡಿದೆ.

ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಸಹಯೋಗದೊಂದಿಗೆ ಕಳೆದ ರಾಜ್ಯ ಬಜೆಟ್‍ನಲ್ಲಿ ಸರ್ಕಾರ 100 ಆಳಸಮುದ್ರ ಮೀನುಗಾರಿಕೆ ದೋಣಿಗಳ ಖರೀದಿಗೆ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಪೈಕಿ 50 ದೋಣಿಗಳನ್ನು ಉತ್ತರ ಕನ್ನಡಕ್ಕೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ಸುಕತೆ ಹೊಂದಿದ್ದರು.

ADVERTISEMENT

₹1.20 ಕೋಟಿ ಮೌಲ್ಯದ ದೋಣಿ ಖರೀದಿಗೆ ಶೇ.40ರಷ್ಟು ಸಹಾಯಧನವನ್ನು ಸರ್ಕಾರ ಭರಣ ಮಾಡಲು ನಿರ್ಧರಿಸಿತ್ತು. ಮಾಲೀಕರು ಮಹಿಳೆಯರಾಗಿದ್ದಾರೆ ಶೇ.60ರಷ್ಟು ಸಹಾಯಧನ ನೀಡಲು ಯೋಜನೆಯಡಿ ಅವಕಾಶ ಕಲ್ಪಿಸಿತ್ತು. ಆದರೆ ವರ್ಷ ಕಳೆದರೂ ಜಿಲ್ಲೆಯಲ್ಲಿ ಕೇವಲ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅಂಕೋಲಾದ ಮೀನುಗಾರರೊಬ್ಬರಿಗೆ ಮಾತ್ರ ದೋಣಿ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ.

‘ಆಳಸಮುದ್ರದ ಗಿಲ್‍ನೆಟ್, ಲಾಂಗ್‍ನೆಟ್ ದೋಣಿಗಳಿಗೆ ಮಾತ್ರ ಸಹಾಯಧನ ನೀಡುವುದಾಗಿ ತಿಳಿಸಲಾಗುತ್ತಿದೆ. ಉತ್ತರ ಕನ್ನಡ ಭಾಗದಲ್ಲಿ ಅಂತಹ ದೋಣಿ ಬಳಕೆ ಮಾಡಲು ಮೀನುಗಾರರು ಒಪ್ಪುವುದಿಲ್ಲ. ಪರ್ಸಿನ್ ದೋಣಿಗಳ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಮುಂದಾಗಬೇಕು. ಈ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಬೇಕು. ಕಾಟಾಚಾರಕ್ಕೆ ಯೋಜನೆ ಘೋಷಿಸಬಾರದು’ ಎನ್ನುತ್ತಾರೆ ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್.

--------------

ಉತ್ತರ ಕನ್ನಡದ ಮೀನುಗಾರರ ಬೇಡಿಕೆಯಂತೆ ಪರ್ಸೀನ್ ಹಾಗೂ ಟ್ರಾಲರ್ ಬೋಟ್‌ಗಳನ್ನು ಖರೀದಿಗೆ ಸಹಾಯಧನ ಒದಗಿಸುವ ಕುರಿತು ನಿಯಮಾವಳಿಗೆ ತಿದ್ತೆದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.