ADVERTISEMENT

ಆಲಂಕಾರಿಕ ಮೀನು ಕೃಷಿಯಲ್ಲಿ ಯಶ ಕಂಡ ರೈತ

ಹತ್ತು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿಯ ಜತೆಗೆ ಪ್ರಯೋಗ ಮಾಡಿದ ಪ್ರಶಾಂತ

Pavitra Bhat
Published 17 ನವೆಂಬರ್ 2023, 4:17 IST
Last Updated 17 ನವೆಂಬರ್ 2023, 4:17 IST
ಸಿದ್ದಾಪುರದ ಕುಣಜಿಯ ಕೃಷಿಕ ಪ್ರಶಾಂತ ಗೌಡರ್ ತಮ್ಮ ತಂದೆ ಬಸವರಾಜ್ ಗೌಡರ್ ಜೊತೆಗೆ ಆಲಂಕಾರಿಕ ಮೀನುಗಳನ್ನು ಬೆಳೆಸುವ ತೊಟ್ಟಿಯ ಪಕ್ಕ ನಿಂತಿರುವುದು
ಸಿದ್ದಾಪುರದ ಕುಣಜಿಯ ಕೃಷಿಕ ಪ್ರಶಾಂತ ಗೌಡರ್ ತಮ್ಮ ತಂದೆ ಬಸವರಾಜ್ ಗೌಡರ್ ಜೊತೆಗೆ ಆಲಂಕಾರಿಕ ಮೀನುಗಳನ್ನು ಬೆಳೆಸುವ ತೊಟ್ಟಿಯ ಪಕ್ಕ ನಿಂತಿರುವುದು   

ಸಿದ್ದಾಪುರ: ಮಲೆನಾಡಿನಲ್ಲಿ ಪಾರಂಪರಿಕ ಬೆಳೆಯಾಗಿರುವ ಅಡಿಕೆ ಜತೆಗೆ ತಾಲ್ಲೂಕಿನ ಕುಣಜಿಯ ರೈತ ಪ್ರಶಾಂತ ಗೌಡರ್ ಆಲಂಕಾರಿಕ ಮೀನುಗಳನ್ನು ಬೆಳೆಸಿ ವಿನೂತನ ಪ್ರಯೋಗಕ್ಕೆ ಮುನ್ನುಡಿ ಬರೆದಿದ್ದಾರೆ.

ಪೂರ್ವಜರಿಂದ ಬಂದ ಸುಮಾರು 10 ಎಕರೆ ಅಡಿಕೆ ತೋಟದಲ್ಲಿ ಕಾಳುಮೆಣಸು, ಬಾಳೆ, ಜಾಯಿಕಾಯಿ, ಲವಂಗ, ಏಲಕ್ಕಿ, ಮುರುಗಲು ಮತ್ತು ಹುಳಿಸಿಪ್ಪೆಗಳಂತಹ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 3 ಎಕರೆ ಗದ್ದೆಯಲ್ಲಿ ಭತ್ತ ಮತ್ತು ಇನ್ನುಳಿದ 2 ಎಕರೆಯಷ್ಟು ಜಾಗದಲ್ಲಿ ರಂಬುಟಾನ್, ಬೆಣ್ಣೆಹಣ್ಣು, ಡುರಿಯಾನ್, ಲಿಚ್ಚಿ, 12 ಬಗೆಯ ಹಲಸು, 10 ಬಗೆಯ ಮಾವಿನ ಹಣ್ಣಿನ ಗಿಡಗಳನ್ನು ಬೆಳೆದು ಕೃಷಿಯಲ್ಲಿ ಸುಸ್ಥಿರ ಆದಾಯ ಗಳಿಸುತ್ತಿದ್ದಾರೆ.

‘ತಂದೆ ಬಸವರಾಜ ಗೌಡರ್ ಸಮಗ್ರ ಕೃಷಿಗೆ ನನಗೆ ಮಾರ್ಗದರ್ಶಕರು. ಕೃಷಿಯಲ್ಲಿ ಏನಾದರೂ ವಿನೂತನ ಪ್ರಯೋಗ ಮಾಡಬೇಕೆಂದು ನಿರ್ಧರಿಸಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯ ಧನ ಪಡೆದು ಆಲಂಕಾರಿಕ ಮೀನುಗಳನ್ನು ಬೆಳೆಯಲು ಆರಂಭಿಸಿದೆ. ತಾಲ್ಲೂಕಿನಲ್ಲಿಯೇ ಇದು ಪ್ರಥಮ ಪ್ರಯೋಗವಾದ್ದರಿಂದ ಆರಂಭದಲ್ಲಿ ಕಷ್ಟವೆನಿಸಿದರೂ ಶಿರಸಿಯ ಮೀನುಗಾರಿಕಾ ಇಲಾಖೆಯಿಂದ ಅಗತ್ಯ ಮಾಹಿತಿಗಳನ್ನು ಪಡೆದು ಆಲಂಕಾರಿಕ ಮೀನುಗಳನ್ನು ಬೆಳೆಯುತ್ತಿದ್ದೇನೆ’ ಎನ್ನುತ್ತಾರೆ ಪ್ರಶಾಂತ ಗೌಡರ್.

ADVERTISEMENT

‘ಗಪ್ಪೀಸ್, ಮೌಲಿ, ಸಾರ್ ಟೇಲ್, ಕೋಯಿ ಎಂಬ ಜಾತಿಯ ಮೀನುಗಳನ್ನು ಬೆಳೆಯುತ್ತಿದ್ದೇನೆ. ಬೆಳೆದ ಮೀನುಗಳು ಸಿದ್ದಾಪುರ, ಶಿರಸಿ ಭಾಗಗಳಲ್ಲಿಯೇ ಮಾರಾಟವಾಗುತ್ತಿದೆ. ಉತ್ಪಾದನೆ ವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಮುಂಬರುವ ವರ್ಷದಿಂದ ಹೊರ ಜಿಲ್ಲೆಗೂ ರಫ್ತು ಮಾಡುವ ಯೋಜನೆ ಇದೆ’ ಎಂದರು.

‘ಪ್ರಶಾಂತ ಅವರಿಗಿರುವ ಕೃಷಿಯಲ್ಲಿನ ಆಸಕ್ತಿ ಮತ್ತು ಪರಿಣಿತಿಗೆ ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಭತ್ತ ಕೃಷಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ, ಆತ್ಮ ಯೋಜನೆಯಡಿ ನೀಡಲಾಗುವ ತಾಲ್ಲೂಕು ಮಟ್ಟದ ಕೃಷಿಕ ಪ್ರಶಸ್ತಿ, ಧಾರವಾಡ ವಿಶ್ವವಿದ್ಯಾಲಯ ನೀಡುವ ತಾಲ್ಲೂಕು ಮಟ್ಟದ ಯುವ ಕೃಷಿಕ ಪ್ರಶಸ್ತಿಗಳು ಲಭಿಸಿವೆ.

ಸಾಂಪ್ರದಾಯಿಕ ಬೆಳೆಗಳನ್ನಷ್ಟೆ ಅವಲಂಬಿಸದೆ ಬಹುಬೆಳೆಯತ್ತ ರೈತರು ಚಿತ್ತಹರಿಸಬೇಕಾಗಿದೆ. ಮೀನು ಕೃಷಿಯಂತಹ ಚಟುವಟಿಕೆಯ ಮೂಲಕವೂ ಆದಾಯ ದ್ವಿಗುಣ ಮಾಡಲು ಅವಕಾಶವಿದೆ

–ಪ್ರಶಾಂತ ಗೌಡರ್ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.